ಬೆಂಗಳೂರು: ನಿವೃತ್ತ ಡಿಜಿ-ಐಜಿಪಿ ಓಂ ಪ್ರಕಾಶ್ ಪತ್ನಿಯಿಂದಲೇ ಕೊಲೆ ಆಗಿದ್ದು, ಇಡೀ ನಗರವನ್ನೇ ಬೆಚ್ಚಿ ಬೀಳಿಸಿದೆ. ಓಂ ಪ್ರಕಾಶ್ ಅವರನ್ನು ಚೂರಿಯಿಂದ ಇರಿದು ಪತ್ನಿ ಪಲ್ಲವಿ ಅವರೇ ಹತ್ಯೆ ಮಾಡಿದ್ದಾರೆ ಎಂಬ ವಿಚಾರ ಬಯಲಾಗಿದೆ. ಈ ಕೊಲೆ ನಡೆಯಲು ನಿಖರ ಕಾರಣ ಏನೆಂದು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ.
ಓಂ ಪ್ರಕಾಶ್ ಅವರು ನಿವೃತ್ತಿಯ ಬಳಿಕ ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್ ಮನೆಯಲ್ಲಿ ವಾಸವಾಗಿದ್ದರು. ಪತ್ನಿಯ ಜೊತೆ ನೆಲೆಸಿದ್ದರು. ಮಾನಸಿಕ ಸ್ಥಿಮಿತತೆ ಕಳೆದುಕೊಂಡ ಪತ್ನಿ ಪಲ್ಲವಿ ಇಂದು ಸಂಜೆ ಓಂ ಪ್ರಕಾಶ್ ಅವರನ್ನು ಕೊಲೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಸೆಂಟ್‌ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆ ನಡೆದ ಬಳಿಕ ಮನೆಯಲ್ಲೇ ಇದ್ದ ಓಂ ಪ್ರಕಾಶ್ ಪತ್ನಿ ಹಾಗೂ ಮಗಳನ್ನು ವಿಚಾರಣೆಗೆಂದು ಕರೆದೊಯ್ಯಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಕೊಲೆಗೆ ಕೌಟುಂಬಿಕ ಕಲಹವೇ ಕಾರಣ ಎಂದು ತಿಳಿದುಬಂದಿದೆ. ಇನ್ನು ಓಂ ಪ್ರಕಾಶ್ ಅವರು ತಮ್ಮ ಸಹೋದರಿ ಹೆಸರಿನಲ್ಲಿ ಜಮೀನು ಮಾಡಿದ್ದು ಅದನ್ನು ಹಿಂಪಡೆಯುವಂತೆ ಗಂಡನ ಮೇಲೆ ಪದೇ ಪದೇ ಜಗಳ ಮಾಡುತ್ತಿದ್ದರು ಎನ್ನಲಾಗಿದೆ.





