ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಇತರ ಮೂವರನ್ನು ಗುರುವಾರ(ಜೂ.20) ಮತ್ತೊಮ್ಮೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಉಳಿದ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ನಡುವೆ ನಟ ಚೇತನ್ ಅಹಿಂಸಾ ಅವರು ದರ್ಶನ್ ಪ್ರಕರದಲ್ಲಿ ಮಂಡ್ಯ ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರ ಮೌನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ನಟ ಚೇತನ್ ಅಹಿಂಸಾ, ಸುಮಲತಾ ತಮ್ಮ ಹಿರಿಯ ಮಗ ದರ್ಶನ್ ಬಗ್ಗೆ ಯಾಕೆ ಮಾತಾಡ್ತಿಲ್ಲ? ದರ್ಶನ್ ಸ್ಟಾರ್‌ನ್ನು ರಾಜಕೀಯಕ್ಕಾಗಿ ಬಳಸಿಕೊಂಡ ಸುಮಲತಾ ಈಗ ಸುಮ್ಮನಿರೋದೇಕೆ ಎಂದು ಪ್ರಶ್ನಿಸಿದ್ದಾರೆ.
ಬಹುತೇಕ ಕೆ.ಎಫ್.ಐ ವ್ಯಕ್ತಿಗಳು ದರ್ಶನ್ ಪ್ರಕರಣ ಒಂದು ವಾರಕ್ಕೂ ಮೀರಿದ್ದರೂ ಅದರ ಬಗ್ಗೆ ಮೌನವಾಗಿದ್ದಾರೆ. 2019 ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ರಾಜಕೀಯ ಲಾಭಕ್ಕಾಗಿ ದರ್ಶನ್ ಅವರ ಸ್ಟಾರ್ ಪವರ್‌ನ್ನು ಬಳಸಿಕೊಂಡ ಸುಮಲರಾ ಅಂಬರೀಶ್ ದರ್ಶನ್‌ರನ್ನು ತಮ್ಮ ಹಿರಿಯ ಮಗ ಎಂದು ಕರೆದಿದ್ದರು. ತಮ್ಮ ಮಗನ ಇತ್ತೀಚಿನ ಘಟನೆಗಳ ಬಗ್ಗೆ ಸುಮಲತಾ ಏನು ಹೇಳುತ್ತಾರೆ? ತಲೆ ಮರೆಸಿಕೊಳ್ಳುವುದು ಒಂದು ಆಯ್ಕೆಯಾಗಿರಬಾರದು ಎಂದು ತಮ್ಮ ಖಾತೆಯಲ್ಲಿ ಚೇತನ್ ಬರೆದುಕೊಂಡಿದ್ದಾರೆ.




