ಬೆಂಗಳೂರು: ನಮ್ಮದು ಜನಪರ ಹೋರಾಟ, ನಮ್ಮ ಹೋರಾಟಕ್ಕೆ ಯಾರೇ ಬೆಂಬಲ ನೀಡಿದರೂ ಸ್ವಾಗತ ಮಾಡುತ್ತೇವೆ ಎಂದು ಬಿಜೆಪಿಯ ರೆಬಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ವಿರುದ್ಧದ ಎರಡನೇ ಹಂತದ ಹೋರಾಟದ ಬಗ್ಗೆ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ವಕ್ಫ್ ಕಾನೂನು ರದ್ದಾಗುವವರೆಗೂ ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದರು.
ಪಾಕಿಸ್ತಾನದ ಮೂರರಷ್ಟು ಆಸ್ತಿ ಈಗ ವಕ್ಫ್ ಆಸ್ತಿಯಾಗಿದೆ. ವಕ್ಫ್‌ಗಳ ಆಸ್ತಿ ಎಲ್ಲಾ ಹಿಂದೂಗಳ ಆಸ್ತಿ. ನಮ್ಮ ಹೋರಾಟದಿಂದಲೇ ದೇಶಾದ್ಯಾಂತ ವಕ್ಫ್ ಆಂದೋಲನ ಶುರುವಾಗಿದ್ದು, ವಕ್ಫ್ ಕಾನೂನು ರದ್ದು ಮಾಡಿಸುವ ಉದ್ದೇಶದಿಂದ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.
ಮೂರು ಹಂತದಲ್ಲಿ ವಕ್ಫ್ ವಿರುದ್ಧ ಹೋರಾಟ ನಡೆಸುತ್ತೇವೆ. ನಂತರ ಪ್ರಧಾನಿ ನರೇಂದ್ರ ಮೋದಿಗೆ ಈ ಕಾನೂನು ರದ್ದು ಮಾಡುವಂತೆ ಮನವಿ ಮಾಡುತ್ತೇವೆ. ದೇಶದಲ್ಲಿ ವಕ್ಫ್ ಕಾನೂನು ರದ್ದಾಗಬೇಕು ಇದು ನಮ್ಮ ಸ್ಪಷ್ಟ ಗುರಿ ಎಂದು ಹೇಳಿದರು.