ಗಂಗಾವತಿ : ದೇಶದ ಜನತೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ಆಸೆ ಹೊಂದಿದೆ. ಮೋದಿ ಒಬ್ಬ ಸಮರ್ಥ ನಾಯಕ ಎಂಬ ಅಭಿಪ್ರಾಯವಿದೆ. ಈ ಹಿನ್ನಲೆ ಹೊಂದಾಣಿಕೆ ಮಾಡಿಕೊಳ್ಳುವ ವಿಚಾರ ಬಂದರೆ ನನ್ನ ಮೊದಲ ಆಧ್ಯತೆ ಮಾತೃ ಪಕ್ಷ ಬಿಜೆಪಿಗೆ ಎಂದು ಶಾಸಕ ಜನಾರ್ಧನ ರೆಡ್ಡಿ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಇಡೀ ದೇಶದ ಜನ ಮತ್ತೊಮ್ಮೆ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಬೇಕು ಎಂಬ ವಿಚಾರ ಹೊಂದಿದ್ದಾರೆ. ಹೀಗಾಗಿ ದೇಶದ ವಿಚಾರ ಬಂದಾಗ ಬಿಜೆಪಿಗರು ಮುಂದೆ ಬಂದು ಹೊಂದಾಣಿಕೆಯ ಪ್ರಸ್ತಾಪವಿಟ್ಟರೆ ಅದಕ್ಕೆ ನಾನು ಸ್ಪಂದಿಸುತ್ತೇನೆ. ಹೊಂದಾಣಿಕೆ ಎಂಬುವುದು ನನ್ನ ಮಾತೃಪಕ್ಷ ಬಿಜೆಪಿಯೊಂದಿಗೆ ಮಾತ್ರ ಎಂದು ತಿಳಿಸಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರದಲ್ಲಿ ನನ್ನ ಪಕ್ಷದಿಂದ ಅಭ್ಯರ್ಥಿ ಹಾಕುವಷ್ಟು ಶಕ್ತಿ ನನಗಿಲ್ಲ. ಅದಕ್ಕೆ ಸಮಯವೂ ಇಲ್ಲ. ಹೀಗಾಗಿ ನಾನು ಮೊದಲಿನಿಂದಲೂ ನನ್ನದು ಒಂದೇ ನಿಲುವು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನನ್ನ ಪಕ್ಷದಿಂದ ಐದಾರು ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಹಾಕುತ್ತೇನೆ. ಆ ಕ್ಷೇತ್ರಗಳಲ್ಲಿ ನನ್ನ ಶಕ್ತಿ ಮೀರಿ ನನ್ನ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಯತ್ನ ಮಾಡುತ್ತೇನೆ ಎಂದರು.




