Mysore
28
few clouds

Social Media

ಗುರುವಾರ, 11 ಡಿಸೆಂಬರ್ 2025
Light
Dark

ಈಗ ಇರುವುದು ನಕಲಿ ಜಾತಿಗಣತಿ ವರದಿ.: ಪ್ರತಿಪಕ್ಷ ನಾಯಕ ಆರ್.‌ಅಶೋಕ್‌ 

ಬೆಂಗಳೂರು: ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಸರ್ಕಾರಕ್ಕೆ ಬರೆದ ಪತ್ರದ ಪ್ರಕಾರ, ಜಾತಿ ಗಣತಿ ವರದಿಯ ಮೂಲ ಪ್ರತಿ ಲಭ್ಯವಾಗಿಲ್ಲ. ಈಗ ಇರುವುದು ನಕಲಿ ವರದಿ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ರಾಜ್ಯದ ಅಭಿವೃದ್ಧಿ ಬಗ್ಗೆ ಯೋಚಿಸದೆ ಜಾತಿ ಗಣತಿ ವರದಿ ಬಿಡುಗಡೆ ಮಾಡುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿಯರು ಸಾಯುತ್ತಿದ್ದಾರೆ. ಒಂದು ರಸ್ತೆ ಕೂಡ ನಿರ್ಮಾಣವಾಗಿಲ್ಲ. ಪರಿಸ್ಥಿತಿ ಹೀಗಿರುವಾಗ ಜಾತಿ ಗಣತಿ ವರದಿ ಬಗ್ಗೆ ಸರ್ಕಾರ ಚಿಂತಿಸುತ್ತಿದೆ. ಕಾಂಗ್ರೆಸ್‌ನ ಸಚಿವರು ಇದನ್ನು ವೈಜ್ಞಾನಿಕ ಹಾಗೂ ಅಸಲಿ ಎಂದು ಹೇಳುತ್ತಿದ್ದಾರೆ. ಜಯಪ್ರಕಾಶ್‌ ಹೆಗ್ಡೆ ವರದಿ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. 26-08-2021ರಂದು ಸೀಲ್‌ ಮಾಡಿದ ಬಾಕ್ಸ್‌ ತೆರೆದಾಗ ವರದಿಯಲ್ಲಿ ಆಯೋಗದ ಹಿಂದಿನ ಅಧ್ಯಕ್ಷರ ಸಹಿ ಇಲ್ಲ ಎಂಬುದನ್ನು ಗಮನಿಸಲಾಗಿದೆ. ಹಸ್ತಪ್ರತಿ ಅಥವಾ ಮೂಲ ವರದಿ ಲಭ್ಯವಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಹಿಂದಿನ ಅಧ್ಯಕ್ಷ ಕಾಂತರಾಜು ಸಹಿ ಹಾಕದೆ ಓಡಿ ಹೋಗಿದ್ದಾರೆ. ಮೂಲ ವರದಿ ಸಿಎಂ ಸಿದ್ದರಾಮಯ್ಯನವರ ಮನೆಯಲ್ಲಿದೆ. ಬೇಕಾದ ಜಾತಿಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ ಎಂದು ಸಚಿವ ಸಂಪುಟದಲ್ಲಿ ಗಲಾಟೆಯಾಗಿದೆ. ಯಾರ ಮನೆಗೂ ಹೋಗದೆ ಸಮೀಕ್ಷೆ ಮಾಡಲಾಗಿದೆ. ಎಲ್ಲರೂ ಸಿದ್ದರಾಮಯ್ಯನವರ ಮನೆ, ಕಚೇರಿಯಲ್ಲಿ ಕುಳಿತು ವರದಿ ತಯಾರಿಸಿದ್ದಾರೆ. 150 ಕೋಟಿ ರೂ. ಎಲ್ಲಿ ಹೋಗಿದೆ ಎಂದು ಸರ್ಕಾರ ತಿಳಿಸಲಿ ಎಂದು ಆಗ್ರಹಿಸಿದರು.

Tags:
error: Content is protected !!