ಬೆಂಗಳೂರು : ರಾಜ್ಯದಲ್ಲಿ ಗೋಧ್ರಾ ರೀತಿ ಘಟನೆ ನಡೆಯಲಿದೆ ಎಂಬ ಕಾಂಗ್ರೆಸ್ ನಾಯಕ ಹರಿಪ್ರಸಾದ್ ಹೇಳಿಕೆ ಸಂಬಂಧಿಸಿದಂತೆ ರಾಜ್ಯಪಾಲ ಗೆಹ್ಲೋಟ್ ಅವರು ಮಧ್ಯಸ್ಥಿಕೆ ವಿಹಿಸುತ್ತಿದ್ದು, ಕಾನೂನು ವ್ಯವಸ್ಥೆಗೂ, ರಾಜ್ಯಪಾಲರಿಗೂ ಏನು ಸಂಬಂಧ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
ಈ ಸಂಬಂಧ ರಾಜ್ಯಪಾಲರು ಪದೇ ಪದೇ ತನಿಖೆ ಆಗುತ್ತಿದೆಯೇ ಎಂದು ಕೇಳುತ್ತಿದ್ದು, ಒತ್ತಡ ಹಾಕುತ್ತಿದ್ದಾರೆ. ರಾಜ್ಯಪಾಲರ ಮಾತಿಗೆ ಗೌರವ ಕೊಟ್ಟು ಗೃಹ ಇಲಾಖೆಯವರು ಕೇಳಿದ್ದಾರೆ. ರಾಜ್ಯಪಾಲರಿಗೆ ಯಾಕಿಷ್ಟು ಆಸಕ್ತಿ ಎಂಬುದನ್ನು ಗಮನಿಸಬೇಕು. ರಾಜ್ಯಪಾಲರಿಗೆ ಕೇಂದ್ರ ಸರ್ಕಾರದ ನಿರ್ದೇಶನವಿದೆಯಾ ಅಥವಾ, ಸರ್ಕಾರ ಮತ್ತು ಹರಿಪ್ರಸಾದ್‌ಗೆ ಮುಜುಗರ ತರಬೇಕು ಎಂದು ಇದೆಯಾ? ಏನೇ ಇದ್ದರೂ ಕಾನೂನು ಚೌಕಟ್ಟಿನಲ್ಲಿ ಮಾಡುತ್ತೇವೆ. ರಾಜ್ಯಪಾಲರಿಗೂ, ಕಾನೂನು ವ್ಯವಸ್ಥೆಗೂ ಏನು ಸಂಬಂಧ? ಎಂದು ಪ್ರಶ್ನಿಸಿದ್ದಾರೆ.
ಎಲ್ಲೆಲ್ಲಿ ಬಿಜೆಪಿ ಪಕ್ಷ ಅಧಿಕಾರದಲ್ಲಿ ಇಲ್ಲ ಅಲ್ಲಲ್ಲಿ ರಾಜ್ಯಪಾಲರ ಮೂಲಕ ಆಳ್ವಿಕೆ ಮಾಡಲು ಹೊರಟಿದ್ದಾರೆ. ಹಿಂದಿನ ಸರ್ಕಾರ ಇದ್ದಾಗ ಯಾವತ್ತೂ ಈ ರೀತಿ ಆಗಿಲ್ಲ. ಈ ಬಾರಿ ಯಾಕೆ ಈ ರೀತಿ ಆಗುತ್ತಿದೆ. ಜನ ಇದರ ಬಗ್ಗೆ ವಿಚಾರ ಮಾಡಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ಹೊರಹಾಕಿದ್ದಾರೆ.