ಬೆಂಗಳೂರು: ಪ್ರಯಾಣಿಕರ ಆಕ್ರೋಶ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮೆಟ್ರೋ ವಿರುದ್ಧ ಅಭಿಯಾನ ಶುರುವಾಗಿದ್ದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಬಿಎಂಆರ್‌ಸಿಎಲ್ ಮೆಟ್ರೋ ದರ ಪರಿಷ್ಕರಣೆಗೆ ಮುಂದಾಗಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಎಂಆರ್‌ಸಿಎಲ್ ಎಂಡಿ ಮಹೇಶ್ವರ್ ರಾವ್ ಅವರು, ದರ ನಿಗದಿ ಸಮಿತಿ ನೀಡಿರುವ ವರದಿ ಆಧಾರದ ಮೇಲೆ ಟಿಕೆಟ್ ದರ ಏರಿಕೆ ಮಾಡಿದ್ದೇವೆ. ಈಗಾಗಲೇ ನಮ್ಮ ಅಧಿಕಾರಿಗಳು ಮತ್ತೊಮ್ಮೆ ದರ ನಿಗದಿ ಸಮಿತಿಯ ವರದಿಯನ್ನು ಪರಿಶೀಲನೆ ಮಾಡುತ್ತಿದ್ದಾರೆ. ಬೆಲೆ ಇಳಿಕೆ ಬಗ್ಗೆ ಸಿಎಂ ಕೂಡ ಸೂಚನೆ ನೀಡಿದ್ದಾರೆ. ಎಲ್ಲೆಲ್ಲಿ ಹೆಚ್ಚು ದರ ಏರಿಕೆ ಆಗಿದೆ ಅಲ್ಲಿ ಏನು ಮಾಡಬಹುದು ಎಂದು ಚೆಕ್ ಮಾಡುತ್ತೇವೆ. ಸಾಕಷ್ಟು ಲೋನ್ ಪೇಮೆಂಟ್ ಬಾಕಿಯಿದೆ. ಈಗಲೂ ಮೆಟ್ರೋ ನಷ್ಟದಲ್ಲಿದೆ. ಆದರೂ ಕೆಲ ಮಾರ್ಗದಲ್ಲಿ ಪ್ರಯಾಣ ದರ ಕಡಿಮೆ ಮಾಡುತ್ತೇವೆ. ಶೀಘ್ರದಲ್ಲೇ ಮೆಟ್ರೋ ಪ್ರಯಾಣ ಪರಿಷ್ಕರಣೆ ದರ ಪಟ್ಟಿ ರಿಲೀಸ್ ಮಾಡುತ್ತೇವೆ. ಆ ಬಳಿಕ ಮೆಟ್ರೋ ದರ ಕಡಿತ ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದರು.





