ರಾಮನಗರ: ಪ್ರಭು ಶ್ರೀರಾಮ ಬಿಜೆಪಿಯ ಸ್ವತ್ತಲ್ಲ. ಅವರು ಸಮಾಜ ಸ್ವತ್ತು. ನಾವು ರಾಮನಗರದಲ್ಲಿ ರಾಮ ಮಂದಿರ ಕಟ್ಟುತ್ತೇವೆ ಎಂದು ಶಾಸಕ ಬಾಲಕೃಷ್ಣ ಹೇಳಿದ್ದಾರೆ. ಜೊತೆಗೆ ರಾಮ ನಗರದಲ್ಲಿ ರಾಮೋತ್ಸವ ಮಾಡುತ್ತೇವೆ ಎಂದು ಶಾಸಕ ಇಕ್ಬಾಲ್ ಹುಸೇನ್ ಕೂಡಾ ಹೇಳಿದ್ದು, ರಾಮ ಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ಸಹಮತ ನೀಡಿದೆ.
ಅಯೋಧ್ಯೆ ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆಗೆ ಸಿದ್ದತೆಗಳು ನಡೆಯುತ್ತಿದ್ದರೇ, ಮತ್ತೊಂದೆಡೆ ಬಿಜೆಪಿ-ಕಾಂಗ್ರೆಸ್ ಪಕ್ಷಗಳು ಕ್ರೆಡಿಟ್ ವಾರ್ ಆರಂಭಿಸಿವೆ. ಇದರ ನಡುವೆ ರಾಮಮಂದಿರ ಕಟ್ಟಲು ಕೈ ನಾಯಕರ ಚರ್ಚೆ ಮಾಡುತ್ತಿದ್ದು, ಇದಕ್ಕೆ ಪುಷ್ಠಿಯೆಂಬಂತೆ ರೇಷ್ಮೆ ನಗರಿ ರಾಮನಗರದಲ್ಲಿ ಬೃಹತ್ ರಾಮಮಂದಿರ ಕಟ್ಟುವ ಚರ್ಚೆ ಬಿರುಸಾಗಿಯೇ ನಡೆಯುತ್ತಿದೆ. ರಾಮನಗರದಲ್ಲಿ ರಾಮೋತ್ಸವ ಮಾಡುತ್ತೇವೆ ಅಂತ ಶಾಸಕ ಇಕ್ಬಾಲ್ ಹುಸೇನ್ ಹೇಳಿದರೆ, ಮಾಗಡಿ ಶಾಸಕ ಎಚ್ ಸಿ ಬಾಲಕೃಷ್ಣ, ರಾಮನಗರಲ್ಲಿ ಬೃಹತ್ ರಾಮಮಂದಿರ ಕಟ್ಟಿ ಅದ್ದೂರಿಯಾಗಿ ಉದ್ಘಾಟನೆ ಮಾಡುತ್ತೇವೆ ಅಂತ ಹೇಳಿದ್ದಾರೆ.
ರಾಮ ನಗರದಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ಸಂಬಂಧವಾಗಿ ಜಿಲ್ಲಾಧಿಕಾರಿ ಹಾಗೂ ಕಂದಾಯ ಅಧಿಕಾರಿಗಳ ಜತೆ ಸಭೆ ನಡೆಸಿರುವ ಸಂಸದ ಡಿ.ಕೆ ಸುರೇಶ್ ಬೃಹತ್ ರಾಮಮಂದಿರ ನಿರ್ಮಾಣಕ್ಕಗಿ ಬೇಕಾಗುವ ಹತ್ತಾರು ಎಕರೆ ಭೂಮಿ ಹುಡುಕಾಟಕ್ಕೆ ಮುಂದಾಗಿದ್ದಾರೆ, ಐತಿಹಾಸಿಕ ಪವಿತ್ರ ಸ್ಥಳ ರಾಮದೇವರ ಬೆಟ್ಟದಲ್ಲಿರುವ ರಾಮಮಂದಿರ ಅಭಿವೃದ್ಧಿ ಪಡಿಸಬೇಕು, ಹಾಗೂ ಬಹುದೊಡ್ಡ ಪ್ರದೇಶದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡಲಾಗುತ್ತಿದೆ.
ಈ ಹಿಂದೆಯಿಂದಲೂ ರಾಮದೇವರ ಬೆಟ್ಟದಲ್ಲಿ ರಾಮೋತ್ಸವ ಮಾಡಬೇಕು ಅಂತ ಸ್ಥಳೀಯ ಶಾಸಕ ಇಕ್ಬಾಲ್ ಹುಸೇನ್ ಪ್ಲ್ಯಾನ್ ಮಾಡುವ ಜೊತೆಗೆ ಇನ್ನೊಂದು ಹೆಜ್ಜೆ ಮುಂದು ಹೋಗಿ ಬೃಹತ್ ಮಟ್ಟದ ರಾಮಮಂದರಿ ನಿರ್ಮಾಣ ಮಾಡೋ ವಿಚಾರ ಈಗ ಮುನ್ನೆಲೆಗೆ ಬಂದಿದೆ. ಈ ವಿಷಯಕ್ಕೆ ಕೈ ನಾಯಕರು ಒಕ್ಕೊರಲಿನಿಂದ ದನಿ ಕೂಡಿಸಿದ್ದಾರೆ.