ಮುಂದಿನ ತಿಂಗಳು 22ರಂದು ಅಯೋಧ್ಯೆಯ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಯಾವೆಲ್ಲಾ ರಾಜಕೀಯ ಗಣ್ಯರು ತೆರಳಲಿದ್ದಾರೆ, ಯಾರಿಗೆಲ್ಲಾ ಆಹ್ವಾನ ಸಿಕ್ಕಿದೆ ಎಂಬ ಚರ್ಚೆಗಳು ಸದ್ಯ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಇನ್ನು ರಾಜ್ಯದ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಈ ಕಾರ್ಯಕ್ರಮಕ್ಕೆ ಹೋಗ್ತಾರಾ ಅಥವಾ ಇಲ್ವಾ ಎಂಬ ಪ್ರಶ್ನೆಗಳೂ ಸಹ ಮೂಡಿವೆ.
ಈ ಪ್ರಶ್ನೆಗೆ ಇದೀಗ ಸ್ವತಃ ಸಿಎಂ ಸಿದ್ದರಾಮಯ್ಯನವರೇ ಮಾಧ್ಯಮದವರ ಜತೆ ಮಾತಾನಾಡಿದಾಗ ಉತ್ತರಿಸಿದ್ದಾರೆ. “ನಾವು ಅಯೋಧ್ಯೆಗೆ ವಿರುದ್ಧ ಇಲ್ಲ, ದೇವಸ್ಥಾನ ಕಟ್ಟಲಿಕ್ಕೆ ವಿರುದ್ಧ ಇಲ್ಲ, ರಾಮಮಂದಿರಕ್ಕೆ ವಿರುದ್ಧ ಇಲ್ಲ. ನಾವು ರಾಮಮಂದಿರ ಪರನೇ ಇದ್ದೇವೆ. ನಮ್ಮೂರಿನಲ್ಲೆಲ್ಲಾ ರಾಮಮಂದಿರಗಳನ್ನು ಕಟ್ಟಿಲ್ವಾ ನಾವು? ಭಜನೆ ಮಾಡಲ್ವ ನಮ್ಮೂರಲ್ಲಿ? ಅದೆಲ್ಲಾ ಮಾಡ್ತಾ ಇದ್ದೇವೆ. ನಮ್ಮೂರಲ್ಲಿ ಇದ್ದಾಗ ನಾನೂ ಭಜನೆಗೆ ಹೋಗ್ತಿದ್ದೆ. ಅದು ಬೇರೆ ಪ್ರಶ್ನೆ. ಅವರು ಈಗ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ತಾ ಇದ್ದಾರೆ ಬಹಳ ಸಂತೋಷ, ಉದ್ಘಾಟನೆ ಮಾಡ್ತಾ ಇದ್ದಾರೆ ಸಂತೋಷ” ಎಂದು ಹೇಳಿಕೆ ನೀಡಿದರು.