ವಯನಾಡು: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಿಂದ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದ ಹಸುಗಳ ಪೈಕಿ 9 ಹಸುಗಳು ಮನೆಗೆ ವಾಪಸ್ ಬಂದಿವೆ.
ವಯನಾಡಿನಲ್ಲಿ ವಾಸವಿದ್ದ ಚಾಮರಾಜನಗರ ಮೂಲದ ವಿನೋದ್ ಹಾಗೂ ಜಯಶ್ರೀ ಎಂಬುವವರು 20ಕ್ಕೂ ಹೆಚ್ಚು ಹಸುಗಳನ್ನು ಸಾಕಿ ಜೀವನ ನಡೆಸುತ್ತಿದ್ದರು.
ಜುಲೈ.29ರ ಮಧ್ಯರಾತ್ರಿಯಲ್ಲಿ ಸಂಭವಿಸಿದ ಭೂಕುಸಿತದಿಂದ ಕೊಟ್ಟಿಗೆಯಲ್ಲಿದ್ದ ಹಸುಗಳೆಲ್ಲಾ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದವು.
ಈ ವೇಳೆ ವಿನೋದ್ ಹಾಗೂ ಜಯಶ್ರೀ ಬೆಟ್ಟದ ಮೇಲೆ ಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದರು.
ಇತ್ತ ಹಸುಗಳು ನೀರಿನಲ್ಲಿ ಕೊಚ್ಚಿಕೊಂಡು ಎತ್ತ ಹೋದವು ಎಂಬುದು ತಿಳಿದಿರಲಿಲ್ಲ. ಆದರೆ ಅಚ್ಚರಿ ಎಂಬಂತೆ ವಿನೋದ್ ಅವರ ಮನೆಯ ಪ್ರದೇಶದ ಹತ್ತಿರವಿರುವ ಟೀ ಎಸ್ಟೇಟ್‌ನಲ್ಲಿ 9 ಹಸುಗಳು ಕಾಣಿಸಿಕೊಂಡಿವೆ. ವಿಷಯ ತಿಳಿದು ಸ್ಥಳಕ್ಕೆ ಹೋದ ವಿನೋದ್ ಇವು ನಮ್ಮ ಹಸುಗಳು ಎಂದು ಖಚಿತಪಡಿಸಿದ್ದಾರೆ.
ಇನ್ನು ಉಳಿದ ಹಸುಗಳು ಎಲ್ಲಿ ಹೋಗಿವೆ ಎಂಬುದು ಗೊತ್ತಾಗಿಲ್ಲ. ಅವು ಕೂಡ ವಾಪಸ್ ಮನೆಗೆ ಬರಬಹುದು ಎಂದು ಕುಟುಂಬ ಸಂತಸದಲ್ಲಿದೆ.
ಇನ್ನು ವಯನಾಡು ದುರಂತದಲ್ಲಿ 350ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 150ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.





