ತಿರುವನಂತಪುರಂ: ವಯನಾಡು ಭೂಕುಸಿತದ ಬಗ್ಗೆ ಎಚ್ಚರಿಕೆ ನೀಡಿದರೂ ಕೇರಳ ಕ್ರಮ ಕೈಗೊಂಡಿಲ್ಲ ಎಂಬ ಅಮಿತ್ ಶಾ ಹೇಳಿಕೆಯನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ತಿರಸ್ಕರಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೇಂದ್ರ ಸರ್ಕಾರದಿಂದ ಭೂಕುಸಿತದ ಬಗ್ಗೆ ಯಾವುದೇ ಮುನ್ನೆಚ್ಚರಿಕೆ ಬಂದಿರಲಿಲ್ಲ. ಕೇಂದ್ರ ಸಚಿವ ಅಮಿತ್ ಶಾ ಹೇಳಿರುವುದು ಶುದ್ಧ ಸುಳ್ಳು. ಈ ಸಂದರ್ಭದಲ್ಲಿ ಸಂತ್ರಸ್ತರ ನೆರವಿಗೆ ಮುಂದಾಗಬೇಕು. ಇದು ಒಬ್ಬೊರನ್ನೊಬ್ಬರು ದೂಷಿಸುವ ಸಮಯವಲ್ಲ. ವಾಸ್ತವಾಂಶ ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ದುರಂತ ಪೀಡಿತ ಪ್ರದೇಶಗಳಲ್ಲಿ ಆರೆಜ್ ಅಲರ್ಟ್ ಘೋಷಿಸಲಾಗಿದೆ. ಕೇಂದ್ರ ಜಲ ಆಯೋಗವು ಜುಲೈ 23- 29ರ ಅವಧಿಯಲ್ಲಿ ಇರುವಂಜಿಪುಳ ಅಥವಾ ಚಾಲಿಯಾರ್‌ನಲ್ಲಿ ಪ್ರವಾಹದ ಎಚ್ಚರಿಕೆಯನ್ನು ನೀಡಲಿಲ್ಲ. ಇವೆಲ್ಲಾ ಸತ್ಯವಾಗಿರುವಾಗ ಅಮಿತ್ ಶಾ ಹೇಗೆ ಸಂಸತ್ತಿನಲ್ಲಿ ಅಸತ್ಯವಾದ ಮಾತುಗಳನ್ನು ಹೇಳಿದರು ಎಂದು ವಿಜಯನ್ ಪ್ರಶ್ನಿಸಿದ್ದಾರೆ.
ಭೂಕುಸಿತವಾದ ಸ್ಥಳದಲ್ಲಿ ಹಿಂದೆಂದೂ ಆಗದ ಮಳೆ ಸುರಿದಿದೆ. ಈಗ ಒಬ್ಬರನ್ನೊಬ್ಬರು ದೂಷಿಸದೇ ವಿಪತ್ತಿಗೆ ಒಳಗಾದವರನ್ನು ರಕ್ಷಿಸಲು ಸಾಮೂಹಿಕ ಪ್ರಯತ್ನ ಮಾಡಬೇಕಾಗಿದೆ ಎಂದು ಸಿಎಂ ವಿಜಯನ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.