Mysore
20
overcast clouds
Light
Dark

ಜಲಮೂಲಗಳು ಬತ್ತಿ ನೀರಿಗೆ ಅಭಾವವಾಗುವ ಸಾಧ್ಯತೆ: ಬರ ಎದುರಿಸಲು ಸಜ್ಜಾಗುವಂತೆ ಅಧಿಕಾರಿಗಳಿಗೆ ಪ್ರಿಯಾಂಕ್‌ ಖರ್ಗೆ ಸೂಚನೆ

ಬೆಂಗಳೂರು :  ಬೇಸಿಗೆ ಅವಧಿ ಆರಂಭವಾಗುತ್ತಿದ್ದು, ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿಗೆ ಅಭಾವವಾಗುವ ಪರಿಸ್ಥಿತಿ ಎದುರಾಗುವ ಸಂಭವವಿರುವುದರಿಂದ ಜಿಲ್ಲಾ ಪಂಚಾಯತಿಗಳು ಅತಿ ಎಚ್ಚರಿಕೆಯಿಂದ ಮುಂಜಾರೂಕತ ಕ್ರಮಗಳನ್ನು ಕೈಗೊಳ್ಳಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ರಾಜ್ಯದ ಎಲ್ಲ ಜಿಲ್ಲಾ ಪಂಚಾಯತಿಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರತಿ ತಿಂಗಳು 2ನೆ ತಾರೀಕಿನಂದು ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣ ಅಧಿಕಾರಿಗಳೊಂದಿಗೆ ವಿಡಿಯೊ ಕಾನ್ಫೆರೆನ್ಸ್‌ ನಡೆಸುವ ಪರಿಪಾಠದಂತೆ ಸಚಿವರು ಇಂದು ಸಭೆ ನಡೆಸಿ, ನೀರಿಗೆ ಅಭಾವವಾಗದಂತೆ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗುವಂತೆ ನಿರ್ದೇಶಿಸಿದರು.

ಮಲೆನಾಡು ಪ್ರದೇಶದಲ್ಲಿ ಗ್ರಾಮೀಣ ಭಾಗದ ಜನರು ಹೆಚ್ಚಾಗಿ ನೈಸರ್ಗಿಕವಾಗಿ ಲಭ್ಯವಾಗುವ ನೀರಿನ ತೊರೆಗಳ ಮೇಲೆ ಅವಲಂಬಿತರಾಗಿರುತ್ತಾರೆ.

ಹಾಗೆಯೇ ರಾಜ್ಯದ ಬಹಳಷ್ಟು ಹಳ್ಳಿಗಳಲ್ಲಿ ಕೊಳವೆ ಬಾವಿ ನೀರಿನ ಮೂಲವಾಗಿರುತ್ತದೆ. ಮಳೆ ಬೀಳದೆ ಬರ ಪರಿಸ್ಥಿತಿ ಉದ್ಭವವಾಗಿರುವ ಹಿನ್ನೆಲೆಯಲ್ಲಿ ಜಲಮೂಲಗಳು ಬತ್ತಿ ನೀರಿಗೆ ಅಭಾವ ಉಂಟಾಗುವ ಸಾಧ್ಯತೆಗಳಿರುತ್ತವೆ.

ಹೀಗೆ ತೊಂದರೆಗೀಡಾಗುವ ಸ್ಥಳಗಳನ್ನು ಮುಂಚಿತವಾಗಿ ಗುರುತಿಸಿಕೊಂಡು, ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಆಡಳಿತವನ್ನು ಸಜ್ಜು ಮಾಡಿಕೊಳ್ಳಬೇಕು ಎಂದು ಸಚಿವರು ಹೇಳಿದರು.

ಬತ್ತಿ ಹೋಗಿರುವ ಕೊಳವೆಬಾವಿಗಳನ್ನು ಪುನುರುಜ್ಜೀವನಗೊಳಿಸುವ ಸಾಧ್ಯತೆಗಳನ್ನು ಪರಿಶೀಲಿಸಬೇಕು. ಬೇಸಿಗೆಯಲ್ಲಿ ನೀರು ಲಭ್ಯವಾಗುವ ಕೊಳವೆಬಾವಿಗಳನ್ನು ಸುಸ್ಥಿತಿಯಲ್ಲಿರಿಸಿಕೊಳ್ಳಬೇಕು.

ನೀರು ಲಭ್ಯವಿರುವ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಮೇಲೆ ಪಡೆಯಲು ಗುರುತಿಸಿ ಇರಿಸಿಕೊಳ್ಳಬೇಕು, ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲು ಟ್ಯಾಂಕರ್‌ಗಳನ್ನು ಸಿದ್ಧವಾಗಿರಿಸಿಕೊಳ್ಳಬೇಕು ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಜಿಲ್ಲಾ ಪಂಚಾಯತಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅನಿವಾರ್ಯವಾದಲ್ಲಿ ಮಾತ್ರ ಹೊಸ ಕೊಳವೆ ಬಾವಿಗಳನ್ನು ಕೊರೆಯಲು ಕ್ರಮ ಕೈಗೊಳ್ಳಬೇಕೂ ಎಂದೂ ಸಚಿವರು ಹೇಳಿದರು.

ಕ್ಷೇತ್ರ ಪ್ರವಾಸ ಮಾಡದ ಅಧಿಕಾರಿಗಳಿಗೆ ನೋಟೀಸ್‌ ಜಾರಿ :  ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜಿಲ್ಲೆಗಳಲ್ಲಿ ಹಾಗೂ ತಾಲ್ಲೂಕು ಪಂಚಾಯತಿಗಳ ತಮ್ಮ ತಾಲ್ಲೂಕುಗಳಲ್ಲಿ ಕ್ಷೇತ್ರ ಪ್ರವಾಸ ಕೈಗೊಂಡು ವರದಿ ಮಾಡಲು ಈಗಾಗಲೇ ಸೂಚನೆ ನೀಡಲಾಗಿದ್ದರೂ ಕೆಲವು ಅಧಿಕಾರಿಗಳು ಈ ನಿರ್ದೇಶನವನ್ನು ಪಾಲಿಸುತ್ತಿಲ್ಲ ಎಂದು ಹೇಳಿದ ಸಚಿವ ಪ್ರಿಯಾಂಕ್‌ ಖರ್ಗೆ ಅಂತಹ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಕ್ಷೇತ್ರ ಪ್ರವಾಸ ಕೈಗೊಳ್ಳಲು ಸೂಚಿಸಿದರು. ಕ್ಷೇತ್ರಗಳಿಗೆ ಭೇಟಿ ನೀಡದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ನೋಟಿಸ್‌ ಜಾರಿ ಮಾಡಲು ಸೂಚಿಸಿದರು.

ಸಾಮಾಜಿಕ ಪರಿಶೋಧನೆಗೆ ಕಡತ ಒಪ್ಪಿಸಿ : ಸಾಮಾಜಿಕ ಪರಿಶೋಧನೆಗಾಗಿ ಗ್ರಾಮ ಪಂಚಾಯತಿಗಳು ವೆಚ್ಚದ ಕಡತಗಳನ್ನು ಸಲ್ಲಿಸುವುದು ಕಡ್ಡಾಯವಾಗಿದ್ದು ಬಹಳಷ್ಟು ಗ್ರಾಮ ಪಂಚಾಯತಿಗಳು ಈ ನಿರ್ದೇಶನವನ್ನು ಪಾಲಿಸದೇ ಇರುವುದನ್ನು ಸಚಿವ ಪ್ರಿಯಾಂಕ್‌ ಖರ್ಗೆ ತೀವ್ರವಾಗಿ ಆಕ್ಷೇಪಿಸಿದರು.

ಆಡಳಿತ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆಯೊಂದಿಗೆ ಸುಧಾರಣೆ ತರಲು ಪ್ರತಿಯೊಬ್ಬ ಅಧಿಕಾರಿ ಸಹ ಬದ್ಧತೆಯಿಂದ ಕಾರ್ಯನಿರ್ವಹಿಸಬೇಕೆಂದು ತಾವು ಬಯಸುವುದಾಗಿ ಹೇಳಿದ ಸಚಿವರು ಸರ್ಕಾರದ ಆಶಯಗಳಿಗೆ ಅನುಗುಣವಾಗಿ ನಡೆದುಕೊಳ್ಳಲು ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸಿದ್ಧರಾಗಬೇಕೆಂದು ಕಿವಿಮಾತು ಹೇಳಿದರು.

ಸಭೆಯಲ್ಲಿ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರವೇಜ್‌, ಪಂಚಾಯತ್‌ ರಾಜ್‌ ಆಯುಕ್ತೆ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ನರೇಗ ಆಯುಕ್ತ ಪವನ್‌ ಕುಮಾರ್‌, ಗ್ರಾಮೀಣ ನೀರು ಸರಬರಾಜು ಇಲಾಖೆಯ ಆಯುಕ್ತ ಕೆ. ನಾಗೇಂದ್ರ ಪ್ರಸಾದ್‌ ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ