Mysore
21
few clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ನಟ ದರ್ಶನ್‌ಗೆ ವಿವಿಐಪಿ ಭದ್ರತೆ : ವಿಡಿಯೋ ವೈರಲ್‌

darshan

ಬೆಂಗಳೂರು : ನಟ ದರ್ಶನ್‍ಗೆ ವಿಮಾನ ನಿಲ್ದಾಣದಲ್ಲಿ ವಿವಿಐಪಿ ಭದ್ರತೆ ಒದಗಿಸಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.ಡೆವಿಲ್ ಚಿತ್ರದ ಚಿತ್ರೀಕರಣಕ್ಕಾಗಿ ಹತ್ತು ದಿನಗಳ ಕಾಲ ವಿದೇಶ ಪ್ರವಾಸದಲ್ಲಿದ್ದ ನಟ ದರ್ಶನ್ ಶುಕ್ರವಾರ ರಾತ್ರಿ ಕುಟುಂಬ ಸಮೇತ ಭಾರತಕ್ಕೆ ಮರಳಿದರು.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಟರ್ಮಿನಲ್ ನಲ್ಲಿ ಮುಖ್ಯದ್ವಾರದಿಂದ ಕಾರಿನವರೆಗು ಕೇಂದ್ರ ಅರೆಸೇನಾ ಪಡೆ ಸಿಐಎಸ್‍ಎಫ್ ಸಿಬ್ಬಂದಿಗಳು ಎಸ್ಕಾರ್ಟ್ ಮಾಡಿದ್ದಾರೆ.

ಸಬ್ ಇನ್‍ಸ್ಪೆಕ್ಟರ್ ದರ್ಜೆಯ ಅಧಿಕಾರಿಯೊಬ್ಬರನ್ನು ಒಳಗೊಂಡಂತೆ ನಾಲ್ವರು ಸಿಐಎಸ್‍ಎಫ್‍ನ ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿಗಳು ದರ್ಶನ್ ಅವರ ಸುತ್ತ ಹೆಜ್ಜೆ ಹಾಕಿ ಎಸ್ಕಾರ್ಟ್ ಮಾಡಿರುವ ವಿಡಿಯೋ ಭಾರೀ ವೈರಲ್ ಆಗಿದೆ.ತಡರಾತ್ರಿ ಆಗಿದ್ದರಿಂದ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಜನ ಕೂಡ ಇರಲಿಲ್ಲ. ದರ್ಶನ್ ಅವರಿಗೆ ಅಭಿಮಾನಿಗಳ ಕಾಟವೂ ಇರಲಿಲ್ಲ. ಆದರೂ ವಿವಿಐಪಿ ಭದ್ರತೆಯೊಂದಿಗೆ ಕಾರಿನವರೆಗೂ ಕರೆತಂದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟಿಹಾಕಿದೆ.

ದರ್ಶನ್ ಅವರಿಗೆ ತಮದೇ ಆದ ಖಾಸಗಿ ಅಂಗರಕ್ಷಕರು ಹಾಗೂ ಸಿಬ್ಬಂದಿಗಳು ಇದ್ದಾರೆ. ವೆಲ್‍ಫೈಯರ್, ರೇಂಜ್‍ರೋವರ್, ಫಾರ್ಚೂನರ್‍ನಂತಹ ಐಷಾರಾಮಿ ಕಾರುಗಳಲ್ಲಿ ದರ್ಶನ್ ಅವರ ಸಿಬ್ಬಂದಿ ಮತ್ತು ಅಂಗರಕ್ಷಕರು ವಿಮಾನನಿಲ್ದಾಣಕ್ಕೆ ಆಗಮಿಸಿದ್ದರು. ಅವರನ್ನೆಲ್ಲಾ ಬದಿಗಿರಿಸಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಗಳು ಎಸ್ಕಾರ್ಟ್ ಮಾಡಿರುವುದೇಕೆ ಎಂಬ ಚರ್ಚೆಗಳು ನಡೆಯುತ್ತಿವೆ.

ವಿಮಾನನಿಲ್ದಾಣದಿಂದ ಹೊರಬರುತ್ತಿದ್ದಂತೆ ದರ್ಶನ್ ಅವರ ಬಳಿಯಿದ್ದ ಬ್ಯಾಗ್ ಅನ್ನು ಗನ್‍ಮ್ಯಾನ್ ಒಬ್ಬರು ಪಡೆದುಕೊಂಡಿದ್ದಾರೆ. ಬೆನ್ನನ್ನು ಹಿಡಿದುಕೊಂಡು ದರ್ಶನ್ ನಡೆದು ಬರುತ್ತಿರುವುದು ತಾವಿನ್ನೂ ಸಂಪೂರ್ಣ ಗುಣಮುಖರಾಗಿಲ್ಲ ಎಂಬುದನ್ನು ತೋರಿಸುವ ಪ್ರಯತ್ನವಾಗಿದೆ.

ಎಸ್ಕಾರ್ಟ್‍ನಲ್ಲಿ ದರ್ಶನ್ ಮುಂದೆ ಬಂದರೆ ಅವರ ಹಿಂದೆ ಪತ್ನಿ ವಿಜಯಲಕ್ಷ್ಮಿ ಕೂಡ ಸಿಐಎಸ್‍ಎಫ್ ಸಿಬ್ಬಂದಿಗಳ ಭದ್ರತೆಯೊಂದಿಗೆ ಆಗಮಿಸಿದ್ದಾರೆ. ಕಾರಿನ ಬಳಿ ಬಂದಾಗ ದರ್ಶನ್ ಸಿಐಎಸ್‍ಎಫ್ ಅಧಿಕಾರಿಗೆ ಧನ್ಯವಾದ ಹೇಳಿದ್ದಾರೆ. ಅವರು ವೆಲ್‍ಕಮ್ ಎಂದು ಪ್ರತಿಕ್ರಿಯಿಸಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ಅವರ ಜಾಮೀನು ಅರ್ಜಿ ಸುಪ್ರೀಂಕೋರ್ಟ್‍ನಲ್ಲಿ ವಿಚಾರಣೆಗೊಳಗಾಗಿದೆ. ಹೈಕೋರ್ಟ್ ನಲ್ಲಿರುವ ಜಾಮೀನನ್ನು ಬೆಂಗಳೂರು ಪೊಲೀಸರು ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸಿದ್ದಾರೆ.

ವಿಚಾರಣಾ ಹಂತದಲ್ಲೇ ಸುಪ್ರೀಂಕೋರ್ಟ್ ಕೊಲೆ ಆರೋಪಿಗೆ ಜಾಮೀನು ನೀಡಿರುವ ಹೈಕೋರ್ಟ್‍ನ ಕ್ರಮಗಳ ಬಗ್ಗೆ ಮೃದು ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದೆ. ದರ್ಶನ್ ಚಿತ್ರೀಕರಣ ನಿಲ್ಲಿಸಿ ಭಾರತಕ್ಕೆ ಆಗಮಿಸಿದ್ದಾರೆ. ಥಾಯ್ಲೆಂಡ್ -ಕಾಂಬೋಡಿಯಾ ನಡುವೆ ಕದನ ಭೀತಿ ಉಂಟಾಗಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ದಿಗ್ಭಂಧನದಂತಹ ಸಂಕಷ್ಟಗಳು ಎದುರಾಗಬಹುದು ಎಂಬ ಕಾರಣಕ್ಕಾಗಿ ದರ್ಶನ್ ಬೆಂಗಳೂರಿಗೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಕುಂತರೂ, ನಿಂತರೂ ಸುದ್ದಿಯಾಗುವ ದರ್ಶನ್ ವಿದೇಶದಿಂದ ಆಗಮಿಸಿದಾಗಲೂ ವಿವಾದಕ್ಕೀಡಾಗಿರುವುದು ವಿಶೇಷ ಎನ್ನಿಸುತ್ತಿದೆ.

Tags:
error: Content is protected !!