ಬೆಂಗಳೂರು : ಅಭಿಮಾನಿಗಳ ತೀವ್ರ ವಿರೋಧದ ನಡುವೆಯೂ ಕನ್ನಡದ ಹೆಸರಾಂತ ಚಿತ್ರ ನಟ ಡಾ. ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಸಮಾಧಿಯನ್ನು ತೆರವುಗೊಳಿಸಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಈ ಘಟನೆಯಿಂದಾಗಿ ವಿಷ್ಣುವರ್ಧನ್ ಅಭಿಮಾನಿಗಳು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಹೈಕೋರ್ಟ್ ಸೂಚನೆ ಮೇರೆಗೆ ನಗರದ ಕೆಂಗೇರಿ ಬಳಿಯ ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣುವರ್ಧನ್ ಅವರ ಸಮಾಧಿಯನ್ನು ರಾತ್ರೋರಾತ್ರಿ ತೆರವುಗೊಳಿಸಲಾಗಿದೆ. ಹಿರಿಯ ನಟನಿಗೆ ಬಾಲಣ್ಣ ಮಕ್ಕಳು ಅವಮಾನಿಸಿದ್ದಾರೆ ಎಂಬ ಆಕ್ರೋಶ ಕೇಳಿ ಬಂದಿದೆ. ಕೊನೆಗೂ ಪೊಲೀಸ್ ನೇತೃತ್ವದಲ್ಲಿ ಬಾಲಣ್ಣ ಮನೆಯವರು ಸಮಾಧಿ ತೆರೆವು ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
2009ರ ಡಿಸೆಂಬರ್ 30ರಂದು ವಿಷ್ಣು ನಿಧನರಾದಾಗ ಅವರ ಅಂತ್ಯಕ್ರಿಯೆಯನ್ನು ಹಿರಿಯ ನಟ ಬಾಲಕೃಷ್ಣ ಅವರ ಕುಟುಂಬಕ್ಕೆ ಸೇರಿದ ಅಭಿಮಾನ್ ಸ್ಟುಡಿಯೋ ಜಾಗದಲ್ಲಿ ನೆರವೇರಿಸಲಾಗಿತ್ತು. ಅಂತ್ಯಕ್ರಿಯೆ ಜಾಗವನ್ನು ಅಭಿಮಾನಿಗಳು ವಿಷ್ಣು ಪುಣ್ಯಭೂಮಿ ಎಂದು ಪೂಜಿಸುತ್ತಿದ್ದರು.
ಅದೇ ಜಾಗದಲ್ಲಿ ವಿಷ್ಣುವರ್ಧನ್ ಸ್ಮಾರಕಕ್ಕೆ ಒಂದು ಶಾಶ್ವತ ನೆಲೆಯನ್ನು ಕಲ್ಪಿಸಬೇಕು ಎಂದು ಹೋರಾಟ ಮಾಡಲಾಗುತ್ತಿತ್ತು. ಅಭಿಮಾನಿಗಳೇ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಬಾಲಕೃಷ್ಣ ಅವರ ಕುಟುಂಬಸ್ಥರು ಅದಕ್ಕೆ ಒಪ್ಪಿರಲಿಲ್ಲ. ಇದೀಗ ಪುಣ್ಯಭೂಮಿಯಲ್ಲಿದ್ದ ವಿಷ್ಣು ಸ್ಮಾರಕವನ್ನು ನೆಲಸಮ ಮಾಡಲಾಗಿದೆ.
ಸಮಾಧಿ ತೆರವು ಮಾಡಿರುವುದರಿಂದ ವಿಷ್ಣು ಅಭಿಮಾನಿಗಳು ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
35 ವರ್ಷಗಳ ಕಲಾಸೇವೆ ಮತ್ತು 200 ಕನ್ನಡ ಚಲನಚಿತ್ರದಲ್ಲಿ ಅಭಿನಯಿಸಿ ಕನ್ನಡಿಗರ ಮನಗೆದ್ದ ಡಾ.ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆಯನ್ನು ಬೆಂಗಳೂರಿನ ಕೆಂಗೇರಿಯಲ್ಲಿರುವ ಅಭಿಮಾನ್ ಸ್ಟುಡಿಯೋ ಆವರಣದಲ್ಲಿ ನಡೆಸಲಾಗಿತ್ತು.
ನಂತರದಲ್ಲಿ ವಿಷ್ಣು ಸಮಾಧಿಯನ್ನು ಸಂರಕ್ಷಿಸಿ, ಅದನ್ನು ಸ್ಮಾರಕವಾಗಿ ಘೋಷಿಸಬೇಕೆಂಬ ಹೋರಾಟ ನಡೆಯುತ್ತಲೇ ಇತ್ತು. ವಾಸ್ತವದಲ್ಲಿ ಹಿರಿಯ ಕಲಾವಿದ ಬಾಲಕೃಷ್ಣ ಅವರಿಗೆ ಸರ್ಕಾರ ಅನುದಾನವಾಗಿ ನೀಡಿರುವ ಜಾಗವೇ ಅಭಿಮಾನ್ ಸ್ಟುಡಿಯೋ.
ಕನ್ನಡಿಗರು ಚಿತ್ರರಂಗದ ಕೆಲಸಗಳಿಗೆ ಮದರಾಸಿಗೆ ಹೋಗುವುದನ್ನು ತಪ್ಪಿಸಬೇಕು ಎಂದು ಕನಸು ಹೊತ್ತು ಬಾಲಣ್ಣನವರು ಸರ್ಕಾರದ ಬಳಿ ಇಪ್ಪತ್ತು ಎಕರೆ ಜಾಗವನ್ನು 99 ವರುಷಕ್ಕೆ ಅನುದಾನವಾಗಿ ಪಡೆದು ಅಭಿಮಾನ್ ಸ್ಟುಡಿಯೋ ನಿರ್ಮಿಸಿದ್ದರು.
ಆದರೆ ಅವರ ಅಗಲಿಕೆಯ ನಂತರ 2004 ರಲ್ಲಿ ಅವರ ಮಕ್ಕಳು ಅದರಲ್ಲಿ ಹತ್ತು ಎಕರೆ ಜಾಗವನ್ನು ಮಾರಾಟ ಮಾಡಿ, ಸರ್ಕಾರಿ ಜಮೀನನ್ನು ದುರುಪಯೋಗಪಡಿಸಿಕೊಂಡಿದ್ದರು. ಈ ಕಾರಣದಿಂದ ಹಿಂದಿನ ಜಿಲ್ಲಾಧಿಕಾರಿ ಶಂಕರ್ ಅವರು ಅಭಿಮಾನ್ ಸ್ಟುಡಿಯೋ ಮುಟ್ಟುಗೋಲಿಗೆ ಆದೇಶಿಸಿದ್ದರು.
ಆಗ ಬಾಲಕೃಷ್ಣ ಅವರ ಕುಟುಂಬಸ್ಥರು ನ್ಯಾಯಾಲಯದಲ್ಲಿ ತಡೆಯಾಜ್ಞೆಯನ್ನು ತಂದಿದ್ದರು. ಈ ನಡುವೆ, ಡಾ.ವಿಷ್ಣುವರ್ಧನ್ ಅವರ ಸ್ಮಾರಕವು ಮೈಸೂರಿಗೆ ಸ್ಥಳಾಂತರಗೊಂಡಿತು. ಆದರೆ ಅಭಿಮಾನಿಗಳು ಸ್ಮಾರಕ ಎಲ್ಲೇ ಆದರೂ ಅಂತ್ಯಸಂಸ್ಕಾರಗೊಂಡ ಜಾಗದಲ್ಲಿಯೇ ಪುಣ್ಯಭೂಮಿ ಇರಬೇಕು ಎಂದು ಹಠವಿಡಿದು, ಪ್ರತಿವರ್ಷದ ಹುಟ್ಟುಹಬ್ಬ ಮತ್ತು ಪುಣ್ಯಸ್ಮರಣೆಯನ್ನು ಅತ್ಯಂತ ಅದ್ದೂರಿಯಾಗಿ ಅಭಿಮಾನ್ ಸ್ಟುಡಿಯೋದ ಡಾ.ವಿಷ್ಣು ಪುಣ್ಯಭೂಮಿಯಲ್ಲಿ ಆಚರಿಸುತ್ತಾ ಬರುತ್ತಿದ್ದಾರೆ.
ಮೈಸೂರಿನಲ್ಲಿದೆ ವಿಷ್ಣು ಸ್ಮಾರಕ
ಮೈಸೂರಿನಲ್ಲಿ ಈಗಾಗಲೇ ಒಟ್ಟು 2.75 ಎಕ್ರೆ ಪ್ರದೇಶದಲ್ಲಿ ವಿಷ್ಣು ಸ್ಮಾರಕ ನಿರ್ಮಾಣ ಮಾಡಲಾಗಿದೆ. ವಿಷ್ಣುವರ್ಧನ್ ಸಿನಿಮಾದಲ್ಲಿನ ಪ್ರಶಸ್ತಿಗಳೂ ಸ್ಮಾರಕದ ಮ್ಯೂಸಿಯಂನಲ್ಲಿವೆ. ವಿಶೇಷವಾದ ವಿಷ್ಣು ಪುತ್ಥಳಿಯನ್ನೂ ನಿರ್ಮಿಸಲಾಗಿದೆ. ನಟನ ಚಿತ್ರರಂಗ ಪ್ರಯಾಣದ ಗ್ಯಾಲರಿ, ವಿಷ್ಣು ಅವರ ಅಪರೂಪದ 600ಕ್ಕೂ ಹೆಚ್ಚು ಫೋಟೋಗಳು, ಅವರು ಬಳಸುತ್ತಿದ್ದ ವಸ್ತುಗಳು, ಬಟ್ಟೆ ಇಲ್ಲಿ ನೋಡಬಹುದಾಗಿದೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ವಿಷ್ಣುವರ್ಧನ್ ಸ್ಮಾರಕಕ್ಕೆ 2020ರ ಸೆ.15 ರಂದು ಶಂಕುಸ್ಥಾಪನೆ ನೆರವೇರಿಸಿದ್ದರು. ವಿಷ್ಣು ಸ್ಮಾರಕದಲ್ಲಿ ಎರಡು ಕ್ಲಾಸ್ ರೂಮ್ ಕೂಡ ನಿರ್ಮಾಣ ಮಾಡಲಾಗಿದ್ದು, ಆಡಿಟೋರಿಯಂ ಕೂಡ ಇದೆ. ಆರಂಭದಿಂದಲೂ ವಿಷ್ಣುವರ್ಧನ್ ಅವರ ಸಮಾಧಿ ಸ್ಥಳ ವಿವಾದದಲ್ಲಿದೆ. ತಮ್ಮ ನೆಚ್ಚಿನ ನಟನ ಅಂತ್ಯಸಂಸ್ಕಾರ ನಡೆದ ಜಾಗದಲ್ಲೇ ಅವರ ಸ್ಮಾರಕ ಇರಬೇಕು ಎಂದು ಅಭಿಮಾನಿಗಳು ಪಟ್ಟು ಹಿಡಿದಿದ್ದರು. ಈ ವಿಚಾರವಾಗಿ ಬಾಲಣ್ಣ ಕುಟುಂಬ ಹಾಗೂ ವಿಷ್ಣು ಅಭಿಮಾನಿಗಳ ನಡುವೆ ಜಟಾಪಟಿ ನಡೆದು ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು





