Mysore
16
few clouds

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಕಾಂಗ್ರೆಸ್ ಸರ್ಕಾರ ಬಡ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಪಾಲಿನ ಶಿಕ್ಷಣ ಭಾಗ್ಯ ಕಸಿಯಲು ಹೊರಟಿದೆ: ವಿಜಯೇಂದ್ರ

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ, ಬಡ ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಪಾಲಿನ ಶಿಕ್ಷಣ ಭಾಗ್ಯವನ್ನು ಕಸಿಯಲು ಹೊರಟಿರುವ ನಿರ್ಧಾರ ಅವಿವೇಕತನದ ಪರಮಾವಧಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ಕಾಂಗ್ರೆಸ್ ಸರ್ಕಾರ ‘ಜ್ಞಾನ ಗಂಗೆಯ ಆಲಯಗಳನ್ನು ಬರಿದು ಮಾಡಿ ಅಕ್ಷರ ದೀವಿಗೆಯನ್ನು ನಂದಿಸಲು ಹೊರಟಿದೆ’. ಅಂತೆಯೇ ರಾಜ್ಯದ 9 ವಿಶ್ವವಿದ್ಯಾನಿಲಯಗಳಿಗೆ ಬೀಗ ಜಡಿಯಲು ಹೊರಟು ಬಡ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಪಾಲಿನ ಶಿಕ್ಷಣ ಭಾಗ್ಯ ಕಸಿಯಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ನಿರ್ಧಾರ ಅವಿವೇಕತನದ ಪರಮಾವಧಿಯಾಗಿದೆ ಎಂದು ಕಿಡಿಕಾರಿದ್ದಾರೆ.

ಶಿಕ್ಷಣದ ದೂರದೃಷ್ಟಿ ಹಾಗೂ ಉನ್ನತ ಶಿಕ್ಷಣದ ಹಕ್ಕು ಪ್ರತಿಯೊಬ್ಬ ವಿದ್ಯಾರ್ಥಿಗೆ ಸರಳವಾಗಿ, ಸುಲಭವಾಗಿ ದೊರೆಯಬೇಕು ಎಂಬ ಮಹತ್ವದ ಉದ್ದೇಶದಿಂದ 9 ವಿಶ್ವವಿದ್ಯಾನಿಲಯಗಳನ್ನು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ತಂದಿತ್ತು. ಆದರೆ ಇವುಗಳ ಅಭಿವೃದ್ಧಿಗಾಗಿ ಮೀಸಲಿರಿಸ ಬೇಕಾಗಿದ್ದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವಿನಿಯೋಗಿಸಿಕೊಳ್ಳುವ ಕಾರಣಕ್ಕಾಗಿ ವಿ.ವಿ.ಗಳನ್ನು ಮುಚ್ಚಲು ಹೊರಟಿರುವ ಕಾಂಗ್ರೆಸ್‌ ಸರ್ಕಾರದ ನಿರ್ಧಾರ ಶಿಕ್ಷಣ ಹಾಗೂ ಅಭಿವೃದ್ಧಿ ವಿರೋಧಿಯ ಧೋರಣೆಯನ್ನು ಸಾಕ್ಷಿಕರಿಸುತ್ತಿದೆ ಎಂದು ತಿಳಿಸಿದ್ದಾರೆ.

ಇತಿಹಾಸದಿಂದಲೂ ದಕ್ಷಿಣ ಭಾರತದಲ್ಲಿ ಕರ್ನಾಟಕ ರಾಜ್ಯ ಶಿಕ್ಷಣದ ಕಾಶಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ, ಅದಕ್ಕೆ ಹಿನ್ನಡೆಯುಂಟು ಮಾಡುವ ನಿರ್ಧಾರಗಳನ್ನು ಈ ಹಿಂದಿನ ಯಾವ ಸರ್ಕಾರಗಳೂ ಕೈಗೊಂಡಿರಲಿಲ್ಲ. ಆದರೆ ಈ ಕಾಂಗ್ರೆಸ್ ಸರ್ಕಾರ ಇಂತಹ ನಿರ್ಧಾರ ಕೈಗೊಂಡಿರುವುದು ನಿಜಕ್ಕೂ ಖಂಡನೀಯ ಕ್ರಮವಾಗಿದೆ ಎಂದು ಆರೋಪಿಸಿದ್ದಾರೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣ ಪಡೆಯಲು ಸಂಕಷ್ಟ ಎದುರಿಸುತ್ತಿದ್ದ ವಿವಿಧ ಪ್ರದೇಶಗಳ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತೆರೆಯಲಾಗಿದ್ದ ಹಾಸನ, ಚಾಮರಾಜನಗರ, ಹಾವೇರಿ, ಕೊಡಗು, ಕೊಪ್ಪಳ, ಬಾಗಲಕೋಟೆ, ಮಂಡ್ಯ, ಮಹರಾಣಿ ಕ್ಲಸ್ಟರ್, ನೃಪತುಂಗ ಸೇರಿದಂತೆ ಇತರ ಹಿಂದುಳಿದ ಪ್ರದೇಶಗಳ ವಿಶ್ವವಿದ್ಯಾನಿಲಯಗಳನ್ನು ಮುಚ್ಚಿಸಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ಕ್ರಮದ ಹಿಂದಿನ ಯೋಚನೆ ಶಿಕ್ಷಣ ವಿರೋಧಿ ನೀತಿಯ ವಿಕೃತ ನಡೆಯಾಗಿದೆ. ಈ ಕೂಡಲೇ ಸರ್ಕಾರ ತನ್ನ ಈ ನಿರ್ಧಾರವನ್ನು ಕೈ ಬಿಟ್ಟು ಈ ಒಂಬತ್ತು ವಿಶ್ವವಿದ್ಯಾನಿಲಯಗಳ ಅಸ್ತಿತ್ವವನ್ನು ಉಳಿಸಿ ಅಭಿವೃದ್ಧಿಗೆ ಸೂಕ್ತ ಅನುದಾನ ಬಿಡುಗಡೆ ಮಾಡಲಿ ಎಂದು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.

Tags:
error: Content is protected !!