ಮೈಸೂರು: ಮಾಜಿ ಸಂಸದ ಹಾಗೂ ಮಾಜಿ ಸಚಿವ ಸಿ.ಎಚ್ ವಿಜಯ್ ಶಂಕರ್ ಅವರನ್ನು ಮೇಘಾಲಯದ ನೂತನ ರಾಜ್ಯಪಾಲರಾಗಿ ನೇಮಕ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಆದೇಶ ಹೊರಡಿಸಿದ್ದಾರೆ. ಕೇಂದ್ರ ಸರ್ಕಾರದ ಶಿಫಾರಸ್ಸಿನ ಮೇಲೆ ನೇಮಕ ಮಾಡಲಾಗಿದೆ.
ವಿಜಯ್ ಶಂಕರ್ ಅವರು 1988ರಲ್ಲಿ ಮೈಸೂರಿನಿಂದ ಆಯ್ಕೆಯಾಗಿ 12ನೇ ಲೋಕಸಭೆಗೆ ಪ್ರವೇಶಿಸಿದ್ದರು. ಬಳಿಕ 1994 ರಲ್ಲಿ ಹುಣಸೂರಿನಿಂದ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾಗಿದ್ದರು, ಜತೆಗೆ ಸಚಿವರಾಗಿಯೂ ಕೆಲಸ ನಿರ್ವಹಿಸಿದ್ದರು. ಇನ್ನೂ 2004 ಲೋಕಸಭಾ ಚುನಾವಣೆಯಲ್ಲಿ ಮೈಸೂರಿನಿಂದ 14ನೇ ಲೋಕಸಭೆಗೆ ಪ್ರವೇಶಿಸಿದ್ದರು. ಉಳಿದಂತೆ ಅವರನ್ನು 2010ರಲ್ಲಿ ಕರ್ನಾಟಕ ವಿಧಾನ ಪರಿಷತ್‌ಗೆ ಆಯ್ಕೆ ಮಾಡಲಾಗಿತ್ತು. 2016ರ ವರೆಗೂ ಎಂಎಲ್‌ಸಿಯಾಗಿ ಕಾರ್ಯನಿರ್ವಹಿಸಿದ್ದರು. 2017ರಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಅವರು 2019ರಲ್ಲಿ ಮತ್ತೆ ಬಿಜೆಪಿಗೆ ಘರ್ ವಾಪ್ಸಿಯಾಗಿದ್ದರು.
ರಾಜ್ಯದ ಮಾಜಿ ಸಚಿವ ಈಗ ಮೇಘಲಯದ ನೂತನ ರಾಜ್ಯಪಾಲರಾಗಿ ಆಯ್ಕೆಯಾಗಿರುವುದಕ್ಕೆ ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಅಭಿನಂದನೆ ತಿಳಿಸಿದ್ದಾರೆ.
ಮೇಘಾಲಯ ರಾಜ್ಯದ ನೂತನ ರಾಜ್ಯಪಾಲರಾಗಿ ನೇಮಕವಾಗಿರುವ ಮಾಜಿ ಸಂಸದರು ಹಾಗೂ ಸರಳ ಸಜ್ಜನಿಕೆಯ ವ್ಯಕ್ತಿತ್ವದ ನಾಯಕರಾದ ಶ್ರೀ ಸಿ.ಹೆಚ್.ವಿಜಯಶಂಕರ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ಸಮಸ್ತ ಕನ್ನಡಿಗರ ಪರವಾಗಿ ವಿಜಯ ಶಂಕರ್ ಅವರಿಗೆ ಶುಭಾಶಯಗಳನ್ನು ಕೋರುತ್ತಾ, ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಅವರ ಹೆಜ್ಜೆಗಳು ನಿರಂತರವಾಗಿ ಸಾಗಲಿ. ಮೇಘಾಲಯದ ಜನರಿಗೆ ಅವರಿಂದ ಒಳ್ಳೆಯದಾಗಲಿ ಎಂದು ಮನಸಾರೆ ಆಶಿಸುತ್ತೇನೆ ಎಂದು ಎಕ್ಸ್‌ನಲ್ಲಿ ಶುಭಾಶಯ ತಿಳಿಸಿದ್ದಾರೆ.