ಬೆಂಗಳೂರು : ಶುಕ್ರವಾರ ವಿಧಾನಸೌಧದ ಸಮ್ಮೇಳನದ ಕೊಠಡಿಯಲ್ಲಿ ಎಲ್ಲಾ ಜಿಲ್ಲೆಗಳ ಡಿಸಿ ಹಾಗೂ ಸಿಇಒಗಳ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸುತ್ತಿದ್ದಾರೆ. ಈ ವೇಳೆ ಅಧಿಕಾರಿ ಹಾಗೂ ಸಚಿವರುಗಳಿಗೆ ಮಧ್ಯಾಹ್ನ ಊಟದ ಬಿಡುವು 30 ನಿಮಿಷ ನೀಡಲಾಗಿತ್ತು. ಸರಿಯಾದ ಸಮಯಕ್ಕೆ ಸಿಎಂ ಖಡಕ್ ಎಂಟ್ರಿ ಕೊಟ್ಟರು. ಈ ವೇಳೆ ಅಧಿಕಾರಿಗಳು ಕಕ್ಕಾಬಿಕ್ಕಿಯಾದರು.
ಅಧಿಕಾರಿ ವರ್ಗಕ್ಕೆ ಮತ್ತು ಸಚಿವರುಗಳಿಗೆ ಬ್ಯಾಂಕ್ವೆಟ್ ಹಾಲ್ ನಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಮುಖ್ಯಮಂತ್ರಿಗಳು ಊಟಕ್ಕೆಂದು ಮನೆಗೆ ತೆರಳಿದರು. ಸಿಎಂ ಮನೆಗೆ ಹೋಗಿದ್ದರಿಂದ ಅವರು ಊಟ ಮುಗಿಸಿ ಬರುವುದು ಲೇಟಾಗಬಹುದು ಎಂದು ಅಧಿಕಾರಿಗಳು ರಿಲಾಕ್ಸ್ ಮೂಡ್ ನಲ್ಲಿ ಊಟ ಮಾಡುತ್ತಿದ್ದರು.
ಆದರೆ, ಮುಖ್ಯಮಂತ್ರಿಗಳು ಊಟ ಮುಗಿಸಿ ಸರಿಯಾಗಿ 30 ನಿಮಿಷಕ್ಕೆ ಸಮ್ಮೇಳನ ಸಭಾಂಗಣಕ್ಕೆ ಖಡಕ್ ಎಂಟ್ರಿ ಕೊಟ್ಟರು. ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಮುಖ್ಯಮಂತ್ರಿಗಳನ್ನು ಬರಮಾಡಿಕೊಂಡು, “ಸರ್ ಅಧಿಕಾರಿಗಳು ಇನ್ನೂ ಊಟಕ್ಕೆ ಹೋಗಿದ್ದಾರೆ ಸರ್, ಬರ್ತಾರೆ ಎಂದು ಸಮಾಧಾನಗೊಳಿಸಿದರು.
ಮುಖ್ಯಮಂತ್ರಿಗಳು ಸರಿಯಾದ ಸಮಯಕ್ಕೆ ಬಂದ ಸುದ್ದಿ ಕೇಳಿ ಬ್ಯಾಂಕ್ವೆಂಟ್ ಹಾಲ್ ನಲ್ಲಿದ್ದ ಅಧಿಕಾರಿಗಳು, ಸಚಿವರು ತಡಬಡಾಯಿಸಿ ದೌಡಾಯಿಸಿದರು.
ಊಟಕ್ಕೆ ಬಿಡುವು ಕೊಡುವಾಗಲೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು 45 ನಿಮಿಷ ಬಿಡುವು ಕೊಡೋಣ ಎಂದಿದ್ದರು. ಮುಖ್ಯಮಂತ್ರಿಗಳು ಅರ್ಧ ಗಂಟೆ ಸಾಕು ಎಂದು ಹೇಳಿದ್ದರು. ತಮ್ಮ ಸೂಚನೆಯಂತೆ ಮುಖ್ಯಮಂತ್ರಿಗಳು ಸರಿಯಾಗಿ 30 ನಿಮಿಷಕ್ಕೆ ಬಂದಿದ್ದು ಅಧಿಕಾರಿಗಳು, ಸಚಿವರನ್ನು ಕಕ್ಕಾಬಿಕ್ಕಿಯಾಗಿಸಿತು.





