ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತವಾಗಿದ್ದ ಮಾಜಿ ಸಚಿವ ಹಾಗೂ ಶಾಸಕ ಬಿ.ನಾಗೇಂದ್ರಗೆ ಷರತ್ತುಬದ್ಧ ಜಾಮೀನು ಸಿಕ್ಕಿದೆ.
ಸೋಮವಾರ 82ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈ ಸಂಬಂಧ ಆದೇಶ ಹೊರಡಿಸಿದ್ದು, 2 ಲಕ್ಷ ಬಾಂಡ್ ಮತ್ತು ಇಬ್ಬರೂ ವ್ಯಕ್ತಿಗಳ ಶ್ಯೂರಿಟಿ ಆಧಾರದ ಮೇಲೆ ಷರತ್ತು ಬದ್ಧ ಜಾಮೀನು ನೀಡಿ ಆದೇಶಿಸಿದೆ.
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ ಹಗರಣದಲ್ಲಿ ಜು.12 ರಂದು ಜಾರಿ ನಿರ್ದೇಶನಾಲಯದಿಂದ(ಇಡಿ) ಬಿ. ನಾಗೇಂದ್ರ ಬಂಧನಕ್ಕೊಳಪಡಿಸಲಾಗಿತ್ತು. ಇತ್ತೀಚೆಗೆ ಇಡಿ ಅಧಿಕಾರಿಗಳು ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. 187ಕೋಟಿ ರೂಪಾಯಿ ಹಗರಣ ಸಂಬಂಧ 4ಸಾವಿರದ 970ಪುಟಗಳ ಆರೋಪ ಪಟ್ಟಿ ಜೊತೆಗೆ 144ಪುಟಗಳ ದೂರು ಸಲ್ಲಿಸಿದ್ದರು. ಇಡಿ ಅವರು ಸಲ್ಲಿಸಿದ್ದ ಆರೋಪ ಪಟ್ಟಿಯಲ್ಲಿ ಮಾಜಿ ಸಚಿವ ನಾಗೇಂದ್ರ ಎ1ಆರೋಪಿಯಾಗಿದ್ದರು.