Mysore
19
overcast clouds
Light
Dark

ಮತ್ತೊಂದು ಪಾದಯಾತ್ರೆಗೆ ಸಜ್ಜಾದ ಬಿಜೆಪಿ: ವಾಲ್ಮೀಕಿ ಹಗರಣ ಖಂಡಿಸಿ ಬಳ್ಳಾರಿ ಪಾದಯಾತ್ರೆ

ಬೆಂಗಳೂರು: ಬೆಂಗಳೂರು-ಮೈಸೂರು ಪಾದಯಾತ್ರೆ ಬೆನ್ನಲ್ಲೇ ಬಿಜೆಪಿ ಮತ್ತೊಂದು ಪಾದಯಾತ್ರೆ ಹಮ್ಮಿಕೊಳ್ಳಲು ಮುಂದಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಮಾಜಿ ಸಚಿವ ಶ್ರೀರಾಮುಲು ಅವರು, ಮಹರ್ಷಿ ವಾಲ್ಮೀಕಿ ಎಸ್‌ಟಿ ಅಭಿವೃದ್ಧಿ ನಿಗಮದ ಅಕ್ರಮಗಳನ್ನು ಎತ್ತಿ ತೋರಿಸುವ ನಿಟ್ಟಿನಲ್ಲಿ ಮುಂದಿನ ಕೆಲವು ವಾರಗಳಲ್ಲಿ ಬಳ್ಳಾರಿಯಲ್ಲಿ ಈ ರ್ಯಾಲಿ ನಡೆಸುತ್ತೇವೆ. ಬಳ್ಳಾರಿ ಭಾಗದಲ್ಲಿ ಮತ್ತೊಮ್ಮೆ ಪಾದಯಾತ್ರೆ ನಡೆಸಲು ಬಿಜೆಪಿ ಉತ್ಸುಕವಾಗಿದೆ ಎಂದು ಹೇಳಿದರು.

ನಮಗೆ ಬೀದರ್‌ನಿಂದ ಬಳ್ಳಾರಿಗೆ ಅಥವಾ ಬಳ್ಳಾರಿಯಿಂದ ಚಿತ್ರದುರ್ಗಕ್ಕೆ ಪಾದಯಾತ್ರೆ ನಡೆಸಬೇಕು. ಅದನ್ನು ಅಂತಿಮಗೊಳಿಸುವ ಮೊದಲು ದೆಹಲಿಯಲ್ಲಿ ನಮ್ಮ ನಾಯಕರೊಂದಿಗೆ ಚರ್ಚೆ ನಡೆಸುತ್ತೇವೆ ಎಂದು ಹೇಳಿದರು.

ಇತ್ತೀಚೆಗೆ ಯಾದಗಿರಿಯಲ್ಲಿ ನಡೆದ ಪಿಎಸ್‌ಐ ಪರಶುರಾಮ್‌ ಆತ್ಮಹತ್ಯೆ ಪ್ರಕರಣ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳಿವೆ. ಈ ಎಲ್ಲಾ ವಿಷಯಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತೇವೆ. ಸರ್ಕಾರ ಬಂದ ಮೇಲೆ ಹಗರಣಗಳು ಜಾಸ್ತಿಯಾಗಿವೆ. ಅಭಿವೃದ್ಧಿ ಕೆಲಸಗಳು ಒಂದೂ ಆಗುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳು ನಿಂತು ಹೋಗಿವೆ. ರಾಜ್ಯದ ಜನರ ಜೀವದ ಜೊತೆ ರಾಜ್ಯ ಸರ್ಕಾರ ಚೆಲ್ಲಾಟವಾಡುತ್ತಿದೆ. ಅದಕ್ಕಾಗಿಯೇ ನಾವು ಪಾದಯಾತ್ರೆ ಕೈಗೊಂಡು ರಾಜ್ಯ ಸರ್ಕಾರಕ್ಕೆ ಚುರುಕು ಮುಟ್ಟಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.