ಕಲಬುರಗಿ : ರಾಜ್ಯದಲ್ಲಿ ಕೆಲವರು ಹುಲಿ ಉಗುರು ಕೊರಳಲ್ಲಿ ಧರಿಸುವುದು, ಹುಲಿ ಚರ್ಮವನ್ನು ಬಳಸುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಈ ಸಂಬಂಧ ಈಗಾಗಲೇ ಕೆಲವು ಬಂಧನಗಳಾಗಿವೆ. ಇಂತಹ ಪ್ರಕರಣಗಳಲ್ಲಿ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ಕಲಬರುಗಿ ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿಯನ್ವಯ ವನ್ಯಜೀವಿಗಳಾದ ಹುಲಿ ಚರ್ಮ, ಉಗುರು, ಆನೆ ದಂತ, ಜಿಂಕೆ ಕೊಂಬು, ಚರ್ಮ ಇತ್ಯಾದಿಯ ಸ್ವಂತಕ್ಕೆ ಬಳಕೆ, ಮಾರಾಟ, ಸಾಗಾಟ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಹೇಳಿದರು.
ಈ ಹಿಂದೆಯೂ ಪ್ರಾಣಿಗಳನ್ನು ಹತ್ಯೆ ಮಾಡಿ ಅವುಗಳ ಹಲ್ಲು, ಚರ್ಮ, ಕೊಂಬು ಹಾಗೂ ಇತರ ಅಂಗಗಳ ಬಳಕೆ ಮಾಡಿರುವುದು ಬಯಲಾಗಿ ಶಿಕ್ಷೆಗೆ ಒಳಗಾಗಿರುವುದು ಗೊತ್ತೆ ಇರುವ ವಿಚಾರ. ಈಗ ರಾಜ್ಯದಲ್ಲೂ ನಡೆಯುತ್ತಿರುವ ವಿದ್ಯಮಾನಗಳಲ್ಲಿ ಹುಲಿ ಉಗುರು ಬಳಕೆ ಮಾಡಿ ಜನರಲ್ಲಿ ಆಕರ್ಷಣೆ ಉಂಟು ಮಡುತ್ತಿರುವ ಹಿನ್ನೆಲೆಯಲ್ಲಿ ಕೆಲವು ಬಂಧನಗಳಾಗಿವೆ. ತಪ್ಪಿತಸ್ಥರ ವಿರುದ್ಧ ನೆಲದ ಕಾನೂನಿನಂತೆ ಕ್ರಮ ಜರುಗುಸಲಾಗುವುದು ಎಂದರು.
ಯಾರೇ ಇರಲಿ ಕಾನೂನಿನಂತೆ ಕ್ರಮ : ಕನ್ನಡ ಚಲನಚಿತ್ರ ನಟ ಸಹಿತ ಸಾರ್ವಜನಿಕವಾಗಿ ಹುಲಿ ಉಗುರು ತೊಟ್ಟು ಆಕ್ಷೇಪಾರ್ಹವಾಗಿ ನಡೆದುಕೊಳ್ಳುವ ಯಾರೇ ಆದರೂ ಕ್ರಮ ಜರುಗಿಸಲು ಅಧಿಕಾರಿಗಳು ಬದ್ಧರಾಗಿದ್ದಾರೆ. ಸಾರ್ವಜನಿಕರು ಈ ನಿಟ್ಟಿನಲ್ಲಿ ದೂರು ನೀಡಿದರೆ, ನೆಲದ ಕಾನೂನಿನ ಅಡಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದರು.
ಪ್ರಾಣಿ ಜನ್ಯ ವಸ್ತು ಗಳ ಬಳಕೆ ಸಂಗ್ರಹ, ಸಾಗಾಟ ಮೊದಲಿನಿಂದಲೂ ನಿಷೇಧ ಮಾಡಲಾಗಿದೆ. ಈ ಅಪರಾಧಕ್ಕೆ ಏಳು ವರ್ಷದ ಶಿಕ್ಷೆ ವಿಧಿಸುವ ಅವಕಾಶ ಇದೆ ಎಂದರು.
ಈ ವೇಳೆ ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಶರಣಕುಮಾರ ಮೋದಿ ಹಾಗೂ ಉಪಸ್ಥಿತರಿದ್ದರು.