ಮೈಸೂರು : ಹಿಮವದ್ ಗೋಪಾಲಸ್ವಾಮಿ ದೇವಸ್ಥಾನದ ಸುತ್ತಾ ಮುತ್ತ ಡ್ರೋನ್ ಅಥವ ಕ್ಯಾಮೆರಾ ಬಳಕೆಗೆ ನಿಷೇಧ ಹೇರಲಾಗಿದೆ.
ಈ ಕುರಿತು ತಹಶೀಲ್ದಾರ್ ಟಿ.ರಮೇಶ್ ಬಾಬು ಆದೇಶ ಹೊರಡಿಸಿದ್ದು, ಪ್ರವಾಸಿಗರು ಆದೇಶವನ್ನು ಕಟ್ಟುನಿಟ್ಟಾಗಿ ಪಾಲೆ ಮಾಡಬೇಕು ಇಲ್ಲವಾದಲ್ಲಿ ಶಿಕ್ಷೆಗೆ ಗುರಿಯಾಗಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿರುವ ಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಬರುವ ಭಕ್ತರು, ಪ್ರವಾಸಿಗರ ಚೆಲ್ಲಾಟಕ್ಕೆ ಬ್ರೇಕ್ ಹಾಕಲು ಈ ನಿಷೇಧ ಹೇರಲಾಗಿದೆ.
ಪ್ರವಾಸಿಗರು ಡ್ರೋನ್, ಮೊಬೈಲ್ ಕ್ಯಾಮರಾಗಳ ಮೂಲಕ ಮನ ಬಂದಂತೆ ಫೋಟೋ ತೆಗೆಯುತ್ತಿದ್ದರು. ಪ್ರತಿನಿತ್ಯ ದೇವಸ್ಥಾನದ ಬಳಿ ಬರುವ ಕಾಡಾನೆಯ ದೃಶ್ಯವನ್ನು ಸೆರೆ ಹಿಡಿದು ಕಾಡು ಪ್ರಾಣಿಗಳನ್ನ ಕೀಟಲೆ ಮಾಡುತ್ತಿದ್ದರು.
ಈ ಸಂಬಂಧ ವಲಯಾಧಿಕಾರಿ ಮಂಜುನಾಥ್ ಅವರು ತಹಶೀಲ್ದಾರ್ ಗೆ ದೂರು ನೀಡಿದ್ದರು. ಅರಣ್ಯಾಧಿಕಾರಿ ಕೋರಿಕೆ ಮೇರೆಗೆ ತಹಶೀಲ್ದಾರ್ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಹಿಮವದ್ ಗೋಪಾಲಸ್ವಾಮಿ ದೇವಸ್ಥಾನದ ಸುತ್ತಮುತ್ತ ಪ್ರದೇಶದಲ್ಲಿ ಕಾಡುಪ್ರಾಣಿಗಳ ಕ್ಯಾಮರಾ ಚಿತ್ರೀಕರಣ ಹಾಗೂ ಡ್ರೋನ್ ಬಳಕೆ ಮಾಡುವುದಕ್ಕೆ ಸಂಪೂರ್ಣ ನಿಷೇಧ ಮಾಡಿ ಮುಜರಾಯಿ ಇಲಾಖೆಯ ಅಧಿಕಾರಿ ಹಾಗೂ ತಹಶೀಲ್ದಾರ್ ಟಿ.ರಮೇಶ್ ಬಾಬು ಆದೇಶ ಹೊರಡಿಸಿದ್ದಾರೆ.





