ಬೆಂಗಳೂರು: ಅವಿವಾಹಿತ ಯುವಕರು ಹುಡುಗಿ ಸಿಗುತ್ತಿಲ್ಲ ಎಂದು ಇನ್ನುಮುಂದೆ ಸಂಕಟಪಡುವ ಹಾಗೂ ಬೇಸರ ಮಾಡಿಕೊಳ್ಳುವ ಅಗತ್ಯವಿಲ್ಲ. ರಾಜ್ಯ ಸರ್ಕಾರ ಅದಕ್ಕಾಗಿ ಪೋರ್ಟಲ್ ಒಂದನ್ನು ತೆರೆದಿದೆ.
ಈ ಪೋರ್ಟಲ್‌ನಿಂದ ಅವಿವಾಹಿತ ಯುವಕರಿಗೆ ವಿವಾಹ ಭಾಗ್ಯ ಕೂಡಿ ಬರಲಿದ್ದು, ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದು.
ಮೊದಲಿಗೆ ಜೀವನ ಸಂಗಮ ಎಂಬ ಪೋರ್ಟಲ್ ಆರಂಭಿಸಿರುವ ಉತ್ತರ ಕನ್ನಡ ಜಿಲ್ಲಾಡಳಿತ ವಿನೂತನ ಪ್ರಯೋಗ ಕೈಗೊಂಡಿದೆ. ಜಿಲ್ಲೆಯಲ್ಲಿನ ಅವಿವಾಹಿತ ರೈತರು, ವಿಕಲಚೇತನರು, ವಿಧವೆಯರಿಗೆ ಸೂಕ್ತ ಸಂಗಾತಿ ಆರಿಸಲು ಹಾಗೂ ಹೆಚ್‌ಐವಿ ಪೀಡಿತ ವ್ಯಕ್ತಿಗಳಿಗೆ ಅದೇ ಸಮುದಾಯದ ವ್ಯಕ್ತಿಯ ನಡುವೆ ವೈವಾಹಿಕ ಸಂಬಂಧವನ್ನು ಬೆಸೆದು ಅವರು ವಿವಾಹವಾಗಲು ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ.
ಇ ಪೋರ್ಟಲ್ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಸಂರಕ್ಷಿಸಲು ಸಂಪೂರ್ಣ ಬದ್ಧವಾಗಿದ್ದು, ಎಲ್ಲಾ ಡೇಟಾವನ್ನು ಗೌಪ್ಯವಾಗಿ ಇರಿಸಿ, ವಿವಾಹ ಹೊಂದಾಣಿಕೆಯ ಉದ್ದೇಶಕ್ಕಾಗಿ ಮಾತ್ರ ಮಾಹಿತಿಯನ್ನು ಬಳಸಲಾಗುತ್ತದೆ.
ಉತ್ತರ ಕನ್ನಡ ಜಿಲ್ಲೆಯ ಸ್ಥಳೀಯ ಅರ್ಹ ಯುವಕ-ಯುವತಿಯರಿಗೆ ಮಾತ್ರ ಈ ವಿವಾಹ ನೋಂದಣಿ ವೇದಿಕೆ ಒದಗಿಸಲಿದ್ದು, ಜಿಲ್ಲೆಯ ನಿವಾಸಿಗಳಿಗೆ ಮಾತ್ರ ಇದರ ನೆರವು ದೊರೆಯಲಿದೆ, ಈ ಬಗ್ಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮಾಹಿತಿ ನೀಡಿದೆ.