ಬೆಂಗಳೂರು: ರಾಜ್ಯ ಸರ್ಕಾರ ಕೇವಲ ಚುನಾವಣಾ ಸ್ವಾರ್ಥಕ್ಕೆ, ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ‘ಸಾಮಾಜಿಕ ನ್ಯಾಯದ ಆದರ್ಶ ಪರಿಕಲ್ಪನೆ’ಯಾದ ಮೀಸಲಾತಿ ವ್ಯವಸ್ಥೆಯನ್ನು ಹಾಳು ಮಾಡುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಮುಸ್ಲಿಮರಿಗೆ ಕಾಂಗ್ರೆಸ್ ಸರ್ಕಾರ 4% ಗುತ್ತಿಗೆ ಮೀಸಲಾತಿ ನೀಡಿರುವುದರ ವಿರುದ್ಧದ ಹೋರಾಟದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಹೊಂದಾಣಿಕೆ ಇಲ್ಲ, ಗೊಂದಲವಿದೆ ಎನ್ನುವುದು ಸತ್ಯಕ್ಕೆ ದೂರ. ಕೆಲ ಪತ್ರಿಕೆ ಮತ್ತು ಸುದ್ದಿವಾಹಿನಿಗಳಲ್ಲಿ ವರದಿಯಾಗಿರುವ ವರದಿಗಳು ಸತ್ಯಕ್ಕೆ ದೂರ ಎಂದು ಸ್ಪಷ್ಟನೆ ನೀಡಿದ್ದಾರೆ.
ವಿಧಾನಮಂಡಲ ಅಧಿವೇಶನ ಆರಂಭಕ್ಕೆ ಮೊದಲೇ ಬೆಂಗಳೂರಿನಲ್ಲಿ ಎನ್‌ಡಿಎ ‘ಸಮನ್ವಯ ಸಮಿತಿ’ ಸಭೆ ನಡೆದು ಎಲ್ಲಾ ವಿಚಾರಗಳನ್ನೂ ಸಮಗ್ರವಾಗಿ ಚರ್ಚಿಸಲಾಗಿದೆ. ಸರದ ವಿರುದ್ಧ ಹೋರಾಟದ ರೂಪುರೇಷೆ ರೂಪಿಸಲಾಗಿತ್ತು. ಆ ಸಭೆಯಲ್ಲಿ ಸ್ವತಃ ನಾನೂ ಭಾಗವಹಿಸಿದ್ದೆ ಎಂದಿದ್ದಾರೆ.
ಕಾಂಗ್ರೆಸ್ ಸರ್ಕಾರ ಕೇವಲ ಚುನಾವಣಾ ಸ್ವಾರ್ಥಕ್ಕೆ, ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ‘ಸಾಮಾಜಿಕ ನ್ಯಾಯದ ಆದರ್ಶ ಪರಿಕಲ್ಪನೆ’ಯಾದ ಮೀಸಲಾತಿ ವ್ಯವಸ್ಥೆಯನ್ನು ಹಾಳು ಮಾಡುತ್ತಿದೆ. ಮೀಸಲಾತಿಯನ್ನೇ ಓಲೈಕೆ ಅಸ್ತ್ರವನ್ನಾಗಿ ಮಾಡಿಕೊಂಡು ರಾಜ್ಯದ ಜನತೆಯ ದಿಕ್ಕು ತಪ್ಪಿಸುತ್ತಿದೆ. ರಾಷ್ಟ್ರದ ಉದ್ದಗಲಕ್ಕೂ ಕಾಂಗ್ರೆಸ್ ಮೀಸಲು ಅರಾಜಕತೆ ಸೃಷ್ಟಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಜೆಡಿಎಸ್ – ಬಿಜೆಪಿ ಪಕ್ಷಗಳು ಈಗಾಗಲೇ ಒಟ್ಟಾಗಿ ಅನೇಕ ಜನಪರ ಹೋರಾಟಗಳಲ್ಲಿ ಭಾಗಿಯಾಗಿವೆ, ಮುಂದೆಯೂ ಹೋರಾಡುತ್ತವೆ. ಈ ಬಗ್ಗೆ ರಾಜಿ ಪ್ರಶ್ನೆಯೇ ಇಲ್ಲ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ದುರ್ಬಲವಾಗಿರುವ ಎಲ್ಲಾ ಸಮುದಾಯಗಳಿಗೆ ಸಮಾನ ಅವಕಾಶಗಳು, ಸೌಲಭ್ಯಗಳು ಸಿಗಬೇಕು. ಆದರೆ, ಒಂದು ನಿರ್ದಿಷ್ಟ ಸಮುದಾಯದ ತುಷ್ಟೀಕರಣ, ಬಹು ಸಮುದಾಯಗಳ ತುಚ್ಚೀಕರಣ ನ್ಯಾಯ ಸಮ್ಮತವಲ್ಲ. ಇದು ಸಂವಿಧಾನಕ್ಕೆ ಎಸಗುವ ಅಪಚಾರ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಮೀಸಲು ಧರ್ಮಾಧಾರಿತ ಅಲ್ಲ. ಅದು ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ನಿಂತಿದೆ. ನಿಂತಿರಬೇಕು ಎನ್ನುವುದು ನಮ್ಮ ಜೆಡಿಎಸ್ ಪಕ್ಷದ ಅಚಲ ನಿಲುವು ಎಂದು ತಿಳಿಸಿದ್ದಾರೆ.





