ಮಂಗಳೂರು: ವಕ್ಫ್ ತಿದ್ದುಪಡಿ ವಿರುದ್ಧ ರಾಜ್ಯದಲ್ಲಿ ವ್ಯಾಪಕ ಪ್ರತಿಭಟನೆ ನಡೆಯುತ್ತಿದ್ದು, ವಕ್ಫ್ ತಿದ್ದುಪಡಿ ಕರಡು ಅನ್ನು ಮೇಲ್ನೋಟಕ್ಕೆ ನೋಡುವಾಗ ಅದು ಸಂವಿಧಾನಕ್ಕೆ ವಿರುದ್ಧವಾಗಿರುವಂತೆ ಕಾಣುತ್ತದೆ ಎಂದು ವಿಧಾನಸಭೆಯ ಸಭಾಪತಿ ಯು.ಟಿ.ಖಾದರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಇಂದು(ಮಾರ್ಚ್.15) ಈ ಕುರಿತು ಮಾತನಾಡಿದ ಅವರು, ಯಾವುದೇ ತಿದ್ದುಪಡಿಗಳಾಗಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನಕ್ಕೆ ಅನುಗುಣವಾಗಿ ಇದ್ದರೆ ಅದನ್ನು ದೇಶದ ಎಲ್ಲಾ ಜನತೆ ಸಂತೋಷವಾಗಿ ಸ್ವೀಕರಿಸುತ್ತಾರೆ. ಆದರೆ ಈ ತಿದ್ದುಪಡಿ ಸಂವಿಧಾನಕ್ಕೆ ವಿರುದ್ಧವಾಗಿದೆ. ಹೀಗಾಗಿ ಅದನ್ನು ಜನರು ಒಪ್ಪಲು ಸಾಧ್ಯವಾಗುತ್ತಿಲ್ಲ. ಏನೋ ದುರುದ್ದೇಶ ಪೂರ್ವಕವಾಗಿ ರೂಪಿಸಲಾದ ತಿದ್ದುಪಡಿ ಕಾಯ್ದೆ ಆಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಏನೋ ದುರುದ್ದೇಶದಿಂದ ಧ್ವನಿವರ್ಧಕ ಬಂದ್ ಮಾಡಿ ಬಿಂಬಿಸಿದ್ದು, ತಿಂಗಳುಗಟ್ಟಲೇ ನಾಟಕ ಮಾಡಿದ್ದರು. ಅಲ್ಲದೇ ಜನರಲ್ಲಿ ಗೊಂದಲ ಮೂಡಿಸಿದ್ದರು. ಆದರೆ ಇದೀಗ ಅಧಿಕಾರಿಗಳು ಬಂದು ಆ ವಿಚಾರದ ಯಕ್ಷಗಾನವನ್ನು ನಿಲ್ಲಿಸುತ್ತಿದ್ದಾರೆ. ಅದನ್ನು ಯಾಕೆ ನಿಲ್ಲಿಸುತ್ತಿದ್ದಾರೆಂದರೆ ವಕ್ಫ್ ವಿಚಾರದಲ್ಲಿ ಇವರು ಮಾಡಿದ ಕಾನೂನಿನ ಬದಲಾವಣೆಯಿಂದಲೇ ನಿಲ್ಲಿಸುತ್ತಿದ್ದಾರೆ. ಯಾರೇ ಆಗಲಿ ಕಾನೂನನ್ನು ದುರುದ್ದೇಶವಾಗಿಟ್ಟುಕೊಂಡು ತಿದ್ದುಪಡಿ ಮಾಡಿದರೆ ಹೀಗೆ ಆಗುವುದು. ಒಬ್ಬೊಬ್ಬ ಅಧಿಕಾರಿ ಬಂದಾಗ ಅವರಿಗೆ ಇಷ್ಟ ಬಂದಂತೆ ಕಾನೂನು ಪಾಲನೆ ಮಾಡುತ್ತಾರೆ. ಹಾಗಾಗಿಯೇ ಒಂದು ಸಮಸ್ಯೆಯಿಂದ ಮತ್ತೊಂದು ಸಮಸ್ಯೆಯನ್ನು ಸೃಷ್ಟಿಸಬಾರದು ಎಂದು ತಿಳಿಸಿದರು.