ಧರ್ಮಸ್ಥಳ: ನೂರಾರು ಶವ ಹೂತಿದ್ದೇನೆ ಎಂದು ಆರೋಪಿಸಿದ್ದ ಅನಾಮಿಕ ದೂರುದಾರ ಮತ್ತಷ್ಟು ಕಡೆ ಅಗೆತಕ್ಕೆ ಒತ್ತಾಯಿಸುತ್ತಿದ್ದಾನೆ ಎನ್ನಲಾಗಿದೆ.
ಧರ್ಮಸ್ಥಳದಲ್ಲಿ 30 ಕಡೆ 300 ಹೆಣ ಹೂತಿದ್ದೇನೆ. ಅಲ್ಲೂ ಶೋಧ ನಡೆಸಿ ಎಂದು ಅನಾಮಿಕ ದೂರುದಾರ ಎಸ್‌ಐಟಿಗೆ ಹೇಳಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಅನಾಮಿಕ ಸಾಕ್ಷಿದಾರನ ದೂರಿನ ಮೇಲೆ ಧರ್ಮಸ್ಥಳ ಗ್ರಾಮದಲ್ಲಿ 13ನೇ ಪಾಯಿಂಟ್‌ನಲ್ಲಿ ನಿನ್ನೆ ಉತ್ಖನನ ನಡೆಸಲಾಯಿತು. ಇದೇ ಮೊದಲ ಬಾರಿಗೆ ಕಾರ್ಯಾಚರಣೆ ವೇಳೆ ಡ್ರೋನ್-ಮೌಂಟೆಡ್ ಜಿಪಿಆರ್ ತಂತ್ರಜ್ಞಾನ ಬಳಸಿ ಶೋಧ ಕಾರ್ಯ ನಡೆಸಲಾಯಿತು. ಉಳಿದ ಕಡೆಯಂತೆ ಇಲ್ಲಿಯೂ ಸಾಕ್ಷಿದಾರನ ಮುಂದೆಯೇ 20 ಅಡಿಗಳವರೆಗೆ ಅಗೆಯಿತಾದರೂ ಯಾವುದೇ ಕುರುಹು ಪತ್ತೆಯಾಗಿಲ್ಲ.
ಈ ಹಿನ್ನೆಲೆಯಲ್ಲಿ ಇಂದು ಕೂಡ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಅನಾಮಿಕ ದೂರುದಾರನಿಗೆ ಮಂಪರು ಪರೀಕ್ಷೆ ನಡೆಸುವ ಸಾಧ್ಯತೆಯಿದೆ.
ಇನ್ನು ಈ ಮೊದಲು ಸಿಕ್ಕಿರುವ ಮೂಳೆಗಳ ಡಿಎನ್‌ಎ ನಾಶವಾಗಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಎಸ್‌ಐಟಿ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ಮುಂದಾಗಿದೆ ಎನ್ನಲಾಗಿದೆ.





