ಹೊಸಪೇಟೆ: ತುಂಗಭದ್ರಾ ಅಣೆಕಟ್ಟೆಯನ್ನು ಗರಿಷ್ಠ 6.5 ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಬಹುದಾದ ರೀತಿಯಲ್ಲಿ ನಿರ್ಮಿಸಿಲಾಗಿದೆ. ಹೀಗಾಗಿ, ನೀರು ಬಿಡುಗಡೆ ಮಾಡುವ ವಿಚಾರದಲ್ಲಿ ನದಿ ಪಾತ್ರದ ಜನರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ತುಂಗಭದ್ರಾ ಜಲಾಶಯ ಮಂಡಳಿಯು ಭರವಸೆ ನೀಡಿದೆ.
ಈ ಬಗ್ಗೆ ಇಂದು(ಆ.11) ಲಿಖಿತ ಹೇಳಿಕೆ ಬಿಡುಗಡೆ ಮಾಡಿರುವ ಜಲಾಶಯ ಮಂಡಳಿ, 1992ರ ಡಿಸೆಂಬರ್‌ನಲ್ಲೂ ಡ್ಯಾಂನಿಂದ 3.65 ಲಕ್ಷ ಕ್ಯೂಸೆಕ್ಸ್ ನೀರು ಹೊರಬಿಡಲಾಗಿತ್ತು. ಆವಾಗಲೂ ಯಾವುದೇ ತೊಂದರೆ ಆಗಿಲ್ಲ. ಸದ್ಯ ಮಳೆಯ ಪ್ರಮಾಣವೂ ತಗ್ಗಿದೆ, ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದೆ.
ಅಣೆಕಟ್ಟೆಯ ಒಟ್ಟಾರೆ ಉದ್ದ 1,798.28 ಮೀಟರ್. ಈ ಪೈಕಿ ನೀರನ್ನು ತಡೆಹಿಡಿಯುವ ತಡೆಗೋಡೆ ಬಲಭಾಗದ ಉದ್ದ 1,097.28 ಮೀಟರ್ ಹಾಗೂ ಎಡಭಾಗದ ಉದ್ದ 483.73 ಮೀಟರ್ ಇದೆ. 33 ಕ್ರಸ್ಟ್‌ಗೇಟ್ ನಲ್ಲಿ 701 ಮೀಟರ್‌ನಷ್ಟು ಉದ್ದವಿದೆ. ಈ ಕ್ರಸ್ಟ್‌ಗೇಟ್‌ಗಳನ್ನು 1955ರಲ್ಲಿ ಅಳವಡಿಸಲಾಗಿದೆ. ಜಲಾಶಯದ ವ್ಯಾಪ್ತಿ 378.10 ಚದರ ಕಿ.ಮೀ ಒಳಗೊಂಡಿದೆ. ಇಂತಹ ಅಣೆಕಟ್ಟೆಯಲ್ಲಿ ಅಗತ್ಯಕ್ಕೆ ತಕ್ಕಂತೆ ಕ್ರಸ್ಟ್‌ಗೇಟ್‌ಗಳನ್ನು ಮೇಲಕ್ಕೆ ಎತ್ತಬಹುದಾದ ಹಾಗೂ ಕೆಳಕ್ಕೆ ಇಳಿಸಬಹುದಾದ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಎಲ್ಲ ಗೇಟ್‌ಗಳಿಗೆ ಕಳೆದ ಮೇ ತಿಂಗಳಲ್ಲೇ ಗ್ರೀಸಿಂಗ್, ಆಯಿಲ್ ಫಿಲ್ಲಿಂಗ್‌ಗಳೆನ್ನೆಲ್ಲ ನಡೆಸಲಾಗಿದೆ ಎಂದು ಜಲಾಶಯ ಮಂಡಳಿಯು ಹೇಳಿದೆ.
ಒಟ್ಟಾರೆ 33ಕ್ರಸ್ಟ್‌ಗೇಟ್‌ನಲ್ಲಿ 16 ಗೇಟ್ ಆಂಧ್ರದ್ದು, 17ರಿಂದ 33 ಕರ್ನಾಟಕದ್ದು. ಸದ್ಯ 19 ಗೇಟ್ ಕೊಚ್ಚಿಕೊಂಡು ಹೋಗಿದ್ದರೂ, ಎರಡೂ ರಾಜ್ಯದ ಅಧಿಕಾರಿಗಳು ಹಾಗೂ ಎಂಜಿನಿಯರ್‌ಗಳು ಒಟ್ಟಾಗಿ ಸಮಾಲೋಚನೆ ನಡೆಸಿ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದಾರೆ.