ತುಮಕೂರು: ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್‌ನ ಚೈನ್ ಕಟ್ಟಾಗಿರುವ ಅವಘಡಕ್ಕೆ ಸಂಬಂಧಿಸಿದಂತೆ ಸಂಸದ ಗೋವಿಂದ ಕಾರಜೋಳ ಪ್ರತಿಕ್ರಿಯೆ ನೀಡಿದ್ದು, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಈ ಬಗ್ಗೆ ತುಮಕೂರಿನಲ್ಲಿ ಮಾತನಾಡಿದ ಅವರು, ತುಂಗಭದ್ರಾ ಡ್ಯಾಂ ಗೇಟ್ ಮುರಿದಿರೋದು ಸರ್ಕಾರಕ್ಕೆ ಅಪಶಕುನದ ಮನ್ಸೂಚನೆ ನೀಡಿದೆ ಎಂದರು.
ತುಂಗಭದ್ರಾ ಜಲಾಶಯದ ಗೇಟ್ ಮುರಿದು ಹೋಗಿರುವುದು ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಅಪಶಕುನ. ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸರಿಯಾಗಿ ಕೆಲಸ ಮಾಡುತ್ತಿಲ್ಲ. ರಾಜ್ಯದಲ್ಲಿ ಆಡಳಿತ ಸರಿಯಾಗಿ ಆಗುತ್ತಿಲ್ಲ. ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ನಿಂತುಹೋಗಿವೆ. ಆದ್ದರಿಂದ ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಏನೂ ಬೇಕಾದರೂ ಆಗಬಹುದು. ಅದಕ್ಕೆ ತುಂಗಭದ್ರಾ ಡ್ಯಾಂನಲ್ಲಿ ನಡೆದಿರುವ ಘಟನೆಯೇ ಸಾಕ್ಷಿ ಎಂದರು.
ಇನ್ನು ರಾಜ್ಯ ಸರ್ಕಾರ ಮೊದಲು ನೀರಾವರಿ ಸಚಿವರನ್ನು ನೇಮಕ ಮಾಡಬೇಕು. ಅವರು ಆಡಳಿತಕ್ಕಿಂತ ಹೆಚ್ಚು ರಾಜಕಾರಣಕ್ಕೆ ಒತ್ತು ಕೊಡುವ ಸ್ಥಿತಿಯಲ್ಲಿದ್ದಾರೆ. ಪಕ್ಷದ ಅಧ್ಯಕ್ಷರಾಗಿ ಅವರು ಚುನಾವಣೆಗೆ ಹೆಚ್ಚು ಒತ್ತು ಕೊಡುತ್ತಿದ್ದಾರೆ. ಹೀಗಾಗಿ ನೀರಾವರಿ ಇಲಾಖೆ ಅನಾಥವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಈಗಾಗಲೇ ತುಂಗಭದ್ರಾ ಡ್ಯಾಂನಿಂದ 15 ಲಕ್ಷ ಎಕರೆಗೆ ಆಗುವಷ್ಟು ನೂರು ವ್ಯರ್ಥವಾಗಿ ಆಂಧ್ರಪ್ರದೇಶ ಹಾಗೂ ತೆಲಂಗಾಣ ಪಾಲಾಗಿದೆ. ಆದ್ದರಿಂದ ನಮ್ಮ ರಾಜ್ಯದ ರೈತರು ಕಣ್ಣೀರು ಹಾಕುವ ಪರಿಸ್ಥಿತಿ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ರಾಜ್ಯದ ಜನತೆಗೆ ನ್ಯಾಯ ಸಿಗುತ್ತಿಲ್ಲ. ಆದ್ದರಿಂದ ಜನರು ಕಣ್ಣೀರು ಹಾಕುತ್ತಿದ್ದಾರೆ. ಜನರ ಕಣ್ಣೀರ ಶಾಪ ಸಿದ್ದರಾಮಯ್ಯರ ಸರ್ಕಾರಕ್ಕೆ ತಟ್ಟಲಿದೆ. ಸಿದ್ದರಾಮಯ್ಯ ಸರ್ಕಾರ ಕೊಚ್ಚಿ ಹೋಗುವ ಕಾಲ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.