ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವ ಬಗ್ಗೆ ಮಾಜಿ ಸಚಿವ ಅರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ನೌಕರರ ಜೊತೆ ಸರ್ಕಾರ ಮಾತುಕತೆ ನಡೆಸುವಲ್ಲಿ ವಿಫಲವಾಗಿದೆ. ಖಾಸಗಿ ಬಸ್‌ನವರು ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ. ಜನಸಾಮಾನ್ಯರ ಹಣ ವ್ಯರ್ಥ ಆಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ತಕ್ಷಣವೇ ಸರ್ಕಾರ ಒಂದು ನಿರ್ಧಾರ ತೆಗೆದುಕೊಳ್ಳಬೇಕು. ಎಲ್ಲದಕ್ಕೂ ನಮ್ಮ ಮೇಲೆ ಬೆರಳು ತೋರಿಸ್ತಾರೆ. ಈಗ ಜನ ನಿಮ್ಮನ್ನು ಗೆಲ್ಲಿಸಿದ್ದಾರಲ್ಲ ನೀವು ಅವರಿಗೆ ಒಳ್ಳೆಯದು ಮಾಡಬೇಕು.
ಖಜಾನೆ ತುಂಬಿ ತುಳುಕುತ್ತಿದೆ ಎಂದು ಬೊಬ್ಬೆ ಹೊಡೆಯುತ್ತಿದ್ರಿ. ಈಗ ಹಣ ಇಲ್ಲ ಅಂತೀರಲ್ಲ. ನುಡಿದಂತೆ ನಡೆದಿದ್ದೇವೆ ಅಂತೀರಲ್ಲ ಇದೇನಾ ನಿಮ್ಮ ಮಾತು. ಗ್ರಾಮೀಣ ಭಾಗದಲ್ಲಿ ತುಂಬಾ ಸಮಸ್ಯೆ ಆಗಿದೆ. ಕೂಡಲೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಎಂದು ಆಗ್ರಹಿಸಿದರು.





