Mysore
23
light rain

Social Media

ಸೋಮವಾರ, 23 ಫೆಬ್ರವರಿ 2026
Light
Dark

ಸರ್ಕಾರಕ್ಕೆ ಡೆಡ್‌ಲೈನ್‌ ನೀಡಿ ಮುಷ್ಕರ ವಾಪಾಸ್‌ ಪಡೆದ ಸಾರಿಗೆ ನೌಕರರು

ksrtc

ಬೆಂಗಳೂರು : ಮುಂದಿನ ಮಾರ್ಚ್ ತಿಂಗಳ 2ರೊಳಗೆ ಸರ್ಕಾರ ತಮ್ಮ ಬೇಡಿಕೆ ಈಡೇರಿಸಬೇಕೆಂದು ಗಡುವು ನೀಡಿರುವ ಸಾರಿಗೆ ನೌಕರರು, ಶುಕ್ರವಾರದಿಂದ ರಾಜ್ಯದಾದ್ಯಂತ ನಡೆಸಲು ಉದ್ದೇಶಿಸಿದ್ದ ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ. ಇದರಿಂದ ನಾಳೆಯಿಂದ ರಾಜ್ಯದಾದ್ಯಂತ ಎಂದಿನಂತೆ ಬಸ್ ಸಂಚಾರ ಸ್ಥಿತಿಯಲ್ಲಿ ಇರಲಿದ್ದು, ಬಸ್‌ಗಳಸೇವೆಯಲ್ಲಿ ವ್ಯತ್ಯಯ ಉಂಟಾಗಬಹುದೆಂಬ ಆತಂಕದಲ್ಲಿದ್ದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ.

38ತಿಂಗಳ ವೇತನ ಹಿಂಬಾಕಿ ಬಿಡುಗಡೆ ಸೇರಿದಂತೆ ಕೆಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕೆಎಸ್ಆರ್‌ಟಿಸಿ, ವಾಯುವ್ಯ, ಈಶಾನ್ಯ ಮತ್ತು ಬಿಎಂಟಿಸಿ ಸೇರಿದಂತೆ ಒಟ್ಟು ನಾಲ್ಕು ನಿಗಮಗಳ ಸಾರಿಗೆ ನೌಕರರು ಶುಕ್ರವಾರದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮುಷ್ಕರ ನಡೆಸಲು ತೀರ್ಮಾನಿಸಿದ್ದರು. ಗುರುವಾರ ಸಾರಿಗೆ ನೌಕರರು ಹಾಗೂ ವಿವಿಧ ಸಾರಿಗೆ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಕೊನೆಗೆ ಸರ್ಕಾರದ ಪರವಾಗಿ ಮಧ್ಯಪ್ರವೇಶ ಮಾಡಿದ ಸಾರಿಗೆ ಇಲಾಖೆ ವ್ಯವಸ್ಥಾಪಕ ನಿರ್ದೇಶಕ ಅಕ್ರಂಪಾಶ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳ ಜೊತೆ ದಿನಪೂರ್ತಿ ನಡೆಸಿದ ಮಾತುಕತೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಮಾರ್ಚ್ 2ರ ವರೆಗೆ ಪ್ರತಿಭಟನೆಯನ್ನು ಮುಂದೂಡುವ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು.

ಈಗ ವಿದ್ಯಾರ್ಥಿಗಳಿಗೆ ಪರೀಕ್ಷೆ ಇರುವುದರಿಂದ ಮುಷ್ಕರವನ್ನು ಕೈಬಿಟ್ಟು ಭರವಸೆ ಈಡೇರಿಕೆಗೆ ಮಾರ್ಚ್‌ 2ರ ಹೊಸಗಡುವು ನೀಡಲಾಗಿದೆ. ಅಷ್ಟರೊಳಗೆ ಸರ್ಕಾರ ತಮ್ಮ ಬೇಡಿಕೆ ಈಡೇರಿಸದಿದ್ದರೆ, ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಅಹೋರಾತ್ರಿ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿಯೂ ಕ್ರಿಯಾ ಸಮಿತಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಬಳಿಕ ವೇದಿಕೆ ಮೇಲೆ ತೀರ್ಮಾನ ಪ್ರಕಟಿಸಿದ ಜಂಟಿ ಕ್ರಿಯಾ ಸಮಿತಿ ಸಂಚಾಲಕ ಜಯದೇವರಾಜ್ ಅರಸ್, ನಮ್ಮ ಬೇಡಿಕೆ ಈಡೇರಿಕೆ ಸಂಬಂಧ ಸರ್ಕಾರ ಸ್ಪಂದಿಸಿದೆ. ಆದರೆ ನಮ್ಮ ಹೋರಾಟ ನಿಲ್ಲುವುದಿಲ್ಲ. 38 ತಿಂಗಳ ಹಿಂಬಾಕಿ ಹಾಗೂ ಎಷ್ಟು ವೇತನ ಹೆಚ್ಚಳ ಮಾಡಬೇಕು ಎಂಬುದರ ಕುರಿತು ಶೀಘ್ರದಲ್ಲಿ ಸಭೆ ಕರೆದು ಇತ್ಯರ್ಥಪಡಿಸಲಾಗುವುದು. ನೌಕರರ ಹಿತದೃಷ್ಟಿಯಿಂದ ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗುತ್ತಿದೆ. ಮಾರ್ಚ್​​ 2ರೊಳಗೆ ಸಭೆ ಕರೆದು ಸಮಸ್ಯೆ ಈಡೇರಿಸದಿದ್ದರೆ ಹೋರಾಟ ಮುಂದುವರೆಸಲಾಗುವುದು ಎಂದು ಹೇಳಿದರು.

ನೌಕರರಿಂದ ಹೈಡ್ರಾಮಾ
ಜಂಟಿ ಕ್ರಿಯಾ ಸಮಿತಿ ಮುಖಂಡರಿಗೆ ಮುತ್ತಿಗೆ ಹಾಕಿದ ಸಾರಿಗೆ ನೌಕರರು, ಘೋಷಣೆ ಕೂಗಿದರು. ನಿವೃತ್ತ ಸಾರಿಗೆ ನೌಕರರೇ ಪ್ರತಿಭಟನೆಯಲ್ಲಿ ಹೆಚ್ಷಿನ ಸಂಖ್ಯೆಯಲ್ಲಿ‌ ಭಾಗಿಯಾಗಿ, ಮುಖಂಡರ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದರು.
ಸರ್ಕಾರಕ್ಕೆ ಇನ್ನೆಷ್ಟು ದಿನ ಅವಕಾಶ ಕೊಡ್ತೀರಿ? ಆಗಲ್ಲ ಅದೆಲ್ಲ‌ ಅಗಲ್ಲ ಎಂದು ವಿರೋಧದ ಘೋಷಣೆ ಕೂಗಿದರು.

ಬೇಡಿಕೆ ಈಡೇರಿಕೆ ಬಗ್ಗೆ ಸರ್ಕಾರಕ್ಕೆ ಡೆಡ್‌ಲೈನ್ ನೀಡಿದ್ದು, ಮಾರ್ಚ್ 2ರವರೆಗೆ ಬೇಡಿಕೆ ಈಡೇರಿಸುವಂತೆ ಮನವಿ ಮಾಡಲಾಗಿದೆ. ಅಲ್ಲಿವರೆಗೆ ಬೇಡಿಕೆ ಈಡೇರದಿದ್ದರೆ, ಮಾರ್ಚ್ 2ರಿಂದ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ನೌಕರರ ಪ್ರಮುಖ ಬೇಡಿಕೆಗಳು ಏನು?

  • 38 ತಿಂಗಳ ಹಿಂಬಾಕಿ ಹಣ ಬಿಡುಗಡೆ
  • ಸರ್ಕಾರಿ ನೌಕರರಿಗೆ ನೀಡುವ ವೇತನಕ್ಕೆ ಸರಿಸಮಾನ ವೇತನ
  • ಕಾರ್ಮಿಕರ ಕಿರುಕುಳ ನಿಲ್ಲಬೇಕು
  • 1-1-2024 ರಿಂದ ವೇತನ ಜಾರಿಗೊಳಿಸಬೇಕು
Tags:
error: Content is protected !!