2019ರ ಏಪ್ರಿಲ್ 1ಕ್ಕಿಂತ ಮುಂಚೆ ನೋಂದಣಿಯಾದ ಎಲ್ಲಾ ವಾಹನಗಳಿಗೂ ಹೆಚ್‌ಎಸ್‌ಆರ್‌ಪಿ ( ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ) ಹಾಕಿಸುವುದು ಕಡ್ಡಾಯ ಎಂದು ಈ ಹಿಂದೆಯೇ ಆದೇಶ ಹೊರಡಿಸಿದ್ದ ರಾಜ್ಯ ಸಾರಿಗೆ ಇಲಾಖೆ ಫೆಬ್ರವರಿ 17 ಕೊನೆಯ ದಿನಾಂಕ ಎಂದು ಗಡುವು ನೀಡಿತ್ತು.
ಈ ಗಡುವು ಸನಿಹಕ್ಕೆ ಬಂದಿದ್ದರೂ ಸಹ ವಾಹನ ಸವಾರರು ಹೆಚ್ಚಿನ ಸಂಖ್ಯೆಯಲ್ಲಿ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಳನ್ನು ಹಾಕಿಸಿಕೊಳ್ಳಲು ಮುಂದಾಗದ ಕಾರಣ ಇದೀಗ ಸಾರಿಗೆ ಇಲಾಖೆ ದಂಡ ಪ್ರಯೋಗಕ್ಕೆ ಮುಂದಾಗಿದೆ. ಗಡುವು ದಿನಾಂಕ ಮುಗಿದ ನಂತರವೂ ನಂಬರ್ ಪ್ಲೇಟ್ ಬದಲಾಯಿಸದೇ ವಾಹನ ಚಲಾವಣೆ ಮಾಡುವಾಗ ಸಿಕ್ಕಿಬಿದ್ದರೆ ದಂಡ ಪಾವತಿಸಲೇಬೇಕಾಗಲಿದೆ. ಮೊದಲ ಬಾರಿಗೆ ಸಿಕ್ಕಿ ಬಿದ್ದರೆ 1000, ಎರಡನೇ ಬಾರಿ ಸಿಕ್ಕಿ ಬಿದ್ದರೆ 2000 ದಂಡ ವಿಧಿಸಲಾಗುತ್ತದೆ.
ಮೊದಲಿಗೆ ಹೆಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅನ್ನು ಕಡ್ಡಾಯವಾಗಿ ಅಳವಡಿಸಲು 2023ರ ನವೆಂಬರ್ 17 ಕೊನೆಯ ದಿನಾಂಕ ಎಂದು ಘೋಷಿಸಲಾಗಿತ್ತು. ಆದರೆ ಇದಕ್ಕೆ ವಾಹನ ಮಾಲೀಕರು ಹೆಚ್ಚಿನ ಆಸಕ್ತಿ ತೋರದ ಕಾರಣ ಗಡುವು ದಿನಾಂಕವನ್ನು ಈ ಫೆಬ್ರವರಿ 17ಕ್ಕೆ ವಿಸ್ತರಿಸಲಾಗಿತ್ತು. ಆದರೆ ಇಲ್ಲಿಯವರೆಗೆ ಕೇವಲ 10 ಲಕ್ಷ ವಾಹನಗಳಿಗಷ್ಟೇ ಹೆಚ್‌ಎಸ್‌ಆರ್‌ಪಿ ಹಾಕಿಸಿಕೊಳ್ಳಲಾಗಿದೆ ಎಂದು ಸಾರಿಗೆ ಇಲಾಖೆಯ ಹೆಚ್ಚುವರಿ ಕಮಿಷನರ್ ಮಲ್ಲಿಕಾರ್ಜುನ ತಿಳಿಸಿದ್ದಾರೆ.