ಬೆಂಗಳೂರು: ವಿದ್ಯಾರ್ಥಿ ಜೀವನದ 2ನೇ ಅತಿ ಮಹತ್ವದ ಘಟ್ಟ ಎನಿಸಿದ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ರಾಜ್ಯಾದ್ಯಂತ ನಾಳೆ ಪ್ರಕಟವಾಗಲಿದೆ.
ಈ ಹಿಂದೆ ನಿಗದಿಯಾದಂತೆ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶವು ಮಂಗಳವಾರ ಪ್ರಕಟವಾಗಬೇಕಿತ್ತು. ರಾಜ್ಯದಲ್ಲಿ ಎರಡು ವಿಧಾನಸಭಾ ಕ್ಷೆ?ತ್ರಗಳ ಉಪಚುನಾವಣೆಗೆ ಮತದಾನ ಬಾಕಿ ಇರುವ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಫಲಿತಾಂಶವನ್ನು ತಡೆಹಿಡಿಯಲಾಗಿತ್ತು.
ಸಾಮಾನ್ಯವಾಗಿ ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದ ವೇಳೆ ಅನುದಾನ ಬಿಡುಗಡೆ, ಫಲಿತಾಂಶ ಪ್ರಕಟ ಸೇರಿದಂತೆ ಮತ್ತಿತರ ಯಾವುದೇ ಯೋಜನೆಗಳ ಘೋಷಣೆಗೆ ಚುನಾವಣಾ ಆಯೋಗ ಅನುಮತಿಯನ್ನು ಪಡೆಯಬೇಕು.
ಇದೀಗ ಕರ್ನಾಟಕ ಪರೀಕ್ಷಾ ಮಂಡಳಿಯು ರಾಜ್ಯ ಚುನಾವಣಾ ಆಯೋಗದ ಅನುಮತಿಯನ್ನು ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.
ನಾಳೆ ಬೆಳಗ್ಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧುಬಂಗಾರಪ್ಪ ಅವರು ಮಂಡಳಿಯ ಕಚೇರಿಯಲ್ಲಿ ಅಧಿಕೃತವಾಗಿ ಫಲಿತಾಂಶ ಪ್ರಕಟಿಸಲಿದ್ದಾರೆ. ಮಧ್ಯಾಹ್ನದ ನಂತರ ಮಂಡಳಿ ನಿಗದಿಪಡಿಸಿದ ವೆಬ್‍ಸೈಟ್‍ನಲ್ಲಿ ವಿದ್ಯಾರ್ಥಿಗಳು ಫಲಿತಾಂಶವನ್ನು ನೋಡಬಹುದು.
ಫಲಿತಾಂಶ ಆನ್ಲೈನ್ನಲ್ಲಿ ನೋಡುವುದು ಹೇಗೆ?
ಮೊದಲು ಅಧಿಕೃತ ವೆಬ್ಸೈಟ್ karresults.nic.in ಗೆ ಭೇಟಿ ನೀಡಿ
‘Karnataka 2nd PUC Result 2026’ ಲಿಂಕ್ ಮೇಲೆ ಕ್ಲಿಕ್ ಮಾಡಿ
ನಿಮ್ಮ ರಿಜಿಸ್ಟ್ರೇಶನ್ ನಂಬರ್ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ
‘Submit’ ಬಟನ್ ಒತ್ತಿದ ತಕ್ಷಣ ನಿಮ್ಮ ಪರೀಕ್ಷೆ ಅಂಕಪಟ್ಟಿ ಸಿಗಲಿದೆ.





