ಚೆನ್ನೈ: ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಡ್ಯಾಂಗಳು ಭರ್ತಿಯಾಗಿವೆ. ಪರಿಣಾಮ ಮಂಡ್ಯದ ಕೆಆರ್‌ಎಸ್ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ತಮಿಳುನಾಡಿನ ಮೆಟ್ಟೂರು ಜಲಾಶಯ ಭರ್ತಿಯತ್ತ ಸಾಗಿದ್ದು, ನೀರು ಬಿಡುಗಡೆ ಮಾಡುವಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸರ್ಕಾರ ಸೂಚನೆ ನೀಡಿದೆ.
120 ಅಡಿ ಎತ್ತರದ ಮೆಟ್ಟೂರು ಅಣೆಕಟ್ಟಿನ ನೀರಿನ ಮಟ್ಟ 111 ಅಡಿಗೆ ಏರಿದ್ದು, ಅಣೆಕಟ್ಟೆ ತುಂಬಲು ಕೇವಲ 7 ಅಡಿ ಮಾತ್ರ ಬಾಕಿ ಇದೆ. ಆದ್ದರಿಂದ ತಕ್ಷಣವೇ ಜಲಾಶಯದಿಂದ ನೀರು ಬಿಡಲು ಸೂಚನೆ ನೀಡಲಾಗಿದೆ.
ಕೆಆರ್‌ಎಸ್ ಜಲಾಶಯದಿಂದ ಕಳೆದ 10 ದಿನಗಳಿಂದ ನೀರನ್ನು ಹೊರಬಿಡಲಾಗುತ್ತಿರುವ ಪರಿಣಾಮ ಮೆಟ್ಟೂರು ಜಲಾಶಯ ಭರ್ತಿಯಾಗಿದ್ದು, ತಮಿಳುನಾಡಿನ ರೈತರ ಮೊಗದಲ್ಲಿ ಇನ್ನಿಲ್ಲದ ಸಂತೋಷ ಮನೆಮಾಡಿದೆ.
ಇನ್ನು ಜುಲೈ.29ರ ವೇಳೆಗೆ ಕರ್ನಾಟಕದಿಂದ ತಮಿಳುನಾಡಿಗೆ ಒಟ್ಟು 70 ಟಿಎಂಸಿಯಷ್ಟು ನೀರು ಹರಿದಿದ್ದು, ಈ ಬಾರಿ ಕಾವೇರಿ ನೀರು ವಿವಾದ ಬಗೆಹರಿಯಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.