ಬೆಂಗಳೂರು: ಇಂದು ಸಾವರ್ಕರ್ ಜನ್ಮದಿನ. ಈ ದಿನದಂದೇ ಬೆಂಗಳೂರಿನ ಯಲಹಂಕದ ನಾಲ್ಕನೇ ವಾರ್ಡ್‌ನ ಡೇರಿ ಸರ್ಕಲ್ ಬಳಿಯಿರುವ ಸಾವರ್ಕರ್ ಹೆಸರಿನ ಸೇತುವೆಗೆ ಕೆಲ ಪುಂಡರು ಮಸಿ ಬಳಿದಿದ್ದಾರೆ.
ಈ ಕೃತ್ಯ ಖಂಡಿಸಿ ಹಿಂದೂ ಪರ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನಲೆ ಪೊಲೀಸ್ ಇಲಾಖೆ ಪ್ರವೀಣ್ ರಕ್ಷ ರಾಜ್ ಮತ್ತು ನಿಶ್ಚಿತ್ ಗೌಡ ಎಂಬುವವರನ್ನು ಬಂಧಿಸಿದ್ದಾರೆ.
ಸಾವರ್ಕರ್‌ಗೆ ಸಿಗುತ್ತಿರುವ ಮನ್ನಣೆ ಭಗತ್ ಸಿಂಗ್ ಅವರಿಗೆ ಸಿಗುತ್ತಿಲ್ಲ, ಈ ಸಾವರ್ಕರ್ ಹೆಸರಿನ ಸೇತುವೆಗೆ ಭಗತ್ ಸಿಂಗ್ ಸೇತುವೆ ಎಂದು ಮರು ನಾಮಕರಣ ಮಾಡಬೇಕು ಎಂದು ಪುಂಡರ ಗುಂಪೊಂದು ಸಾವರ್ಕರ್ ಜನ್ಮ ದಿನದಂದೇ ಯಲಹಂಕ ಸೇತುವೆಯಲ್ಲಿನ ಸಾವರ್ಕರ್ ಹೆಸರಿಗೆ ಮಸಿ ಬಳಿದಿದ್ದಾರೆ. ಈ ಸಂಬಂಧ ಮಾಗಡಿ ರೋಡ್‌ನ ಮೂವರನ್ನು ಯಲಹಂಕ ಉಪನಗರ ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ ಖಂಡಿಸಿ ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಮೊದಲು ಸಾವರ್ಕರ್ ಬಗ್ಗೆ ತಿಳಿದುಕೊಳ್ಳಬೇಕು. ಈಗ ಮೂವರನ್ನು ಬಂಧಿಸಿದ್ದೀರಿ. ಉಳಿದವರನ್ನು ಶೀಘ್ರವೇ ಬಂಧಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.