Mysore
27
scattered clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಕರಾಳ ದಿನಾಚರಣೆ ಮಾಡುವವರಿಗೆ ತಾಯಿನೆಲದ ತಿಳುವಳಿಕೆ ಬೇಕು: ಸತೀಶ್ ಜಾರಕಿಹೊಳಿ

ಬೆಂಗಳೂರು : ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕರಾಳ ದಿನ ಆಚರಣೆ ಮಾಡುವವರಿಗೆ ತಾಯ್ನೆಲದ ಬಗ್ಗೆ ತಿಳುವಳಿಕೆ ಅಗತ್ಯ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಬೆಳಗಾವಿಯಲ್ಲಿಂದು ಕನ್ನಡ ರಾಜ್ಯೋತ್ಸವ ಆಚರಣೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಸಂಘಟನೆಯವರು ಸರ್ಕಾರದ ಅನುಮತಿ ಇಲ್ಲದೆಯೂ ಕರಾಳ ದಿನಾಚರಣೆ ಮಾಡುತ್ತಾರೆ. ಇಲ್ಲಿಯೇ ವಾಸ ಮಾಡುವ ಅವರಿಗೆ ತಿಳುವಳಿಕೆ ಬರಬೇಕು. ಹಕ್ಕುಗಳಿಗಾಗಿ ಭಾಷಣ ಮಾಡಲಿ, ಆದರೆ ಸರ್ಕಾರವನ್ನು ವಿರೋಧ ಮಾಡುವುದು ಸರಿಯಲ್ಲ ಎಂದರು.

ಯಾವುದೇ ಕಾರ್ಯಕ್ರಮವಾದರೂ ರಕ್ಷಣೆ ನೀಡುವುದು ಪೊಲೀಸರ ಜವಾಬ್ದಾರಿ. ಒಂದು ವೇಳೆ ರಕ್ಷಣೆ ನೀಡದೆ ಇದ್ದರೆ ಗಲಾಟೆಯಾದರೆ ಯಾರು ಹೊಣೆ ಅದಕ್ಕಾಗಿ ರಕ್ಷಣಾ ವ್ಯವಸ್ಥೆ ಮಾಡಲಾಗುತ್ತದೆ. ಅದನ್ನು ಎಂಇಎಸ್‍ಗೆ ರಕ್ಷಣೆ ಎಂದು ಬಿಂಬಿಸಬೇಕಿಲ್ಲ ಎಂದರು.

ಸರ್ಕಾರ ನಾಡ ವಿರೋಧಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುತ್ತದೆ. ಆದರೆ ಪ್ರಕರಣ ನ್ಯಾಯಾಲಯಕ್ಕೆ ಹೋದ ಮೇಲೆ ನಾವು ಏನು ಮಾಡಲಾಗುವುದಿಲ್ಲ. ನ್ಯಾಯಾಲಯದಲ್ಲಿ ಜಾಮೀನು ದೊರೆಯುತ್ತದೆ, ಕೆಲವೊಮ್ಮೆ ಪ್ರಕರಣವು ವಜಾಗೊಳ್ಳುತ್ತದೆ ಎಂದರು.

ಈ ಬಾರಿ ಮುನ್ನೆಚ್ಚರಿಕೆಯಾಗಿ 35 ಜನರನ್ನು ಬಂಧಿಸಲಾಗಿದೆ ಎಂದು ಪತ್ರಿಕಾಗೋಷ್ಟಿಯಲ್ಲಿದ್ದ ಪೊಲೀಸ್ ಅಧಿಕಾರಿ ಸಚಿವರಿಗೆ ಮಾಹಿತಿ ನೀಡಿದರು. ಮುಂದುವರೆದ ಸಚಿವ ಸತೀಶ್ ಜಾರಕಿಹೊಳಿ, ಆಡಳಿತಾತ್ಮಕ ಹಿತದೃಷ್ಟಿಯಿಂದ ಬೆಳಗಾವಿ ಜಿಲ್ಲೆ ವಿಭಜನೆಯಾಗಬೇಕು ಎಂಬುದು ಎಲ್ಲಾ ಕಡೆಯಿಂದ ಪಕ್ಷಾತೀತವಾಗಿ ಬೇಡಿಕೆಯಾಗಿದೆ. ಆದರೆ ಅದಕ್ಕೂ ಮಹೂರ್ತ ಕೂಡಿ ಬರಬೇಕು, ಹಣಕಾಸು ಲಭ್ಯತೆ ನೋಡಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.

ಜಿಲ್ಲಾ ವಿಭಜನೆಗೂ ಮೊದಲು ಬೆಳಗಾವಿ ತಾಲ್ಲೂಕು ವಿಭಜನೆಯಾಗಬೇಕಿದೆ. ಪ್ರಸ್ತುತ ತಾಲ್ಲೂಕಿನಲ್ಲಿ ಎಂಟುವರೆ ಲಕ್ಷ ಮತದಾರರಿದ್ದಾರೆ. 11 ಲಕ್ಷ ಜನಸಂಖ್ಯೆ ಇದೆ. ನಿಗದಿತ ಪ್ರಮಾಣಕ್ಕಿಂತಲೂ ಶೇ.20ರಷ್ಟು ಹೆಚ್ಚು ಜನಸಂಖ್ಯೆ ಇದೆ. ಉಡುಪಿ ಜಿಲ್ಲೆಯಲ್ಲಿ ಎಂಟು ಲಕ್ಷ ಜನಸಂಖ್ಯೆ ಇದ್ದರೇ ಅದಕ್ಕಿಂತಲೂ ಹೆಚ್ಚು ಜನ ಬೆಳಗಾವಿ ತಾಲ್ಲೂಕಿನಲ್ಲಿ ವಾಸಿಸುತ್ತಿದ್ದಾರೆ. ಆದಷ್ಟು ಶೀಘ್ರ ತಾಲ್ಲೂಕು ವಿಭಜನೆ ಮಾಡಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಚಿವ ಸಂಪುಟ ಸಭೆಯಲ್ಲಿ ಮನವಿ ಮಾಡಿದ್ದಾರೆ ಎಂದರು.

ಬೆಳಗಾವಿ ನಗರ ಒಂದು ತಾಲ್ಲೂಕು ಆಗಲಿದೆ, ಬೆಳಗಾವಿ ಗ್ರಾಮೀಣ ಪ್ರತ್ಯೇಕ ತಾಲ್ಲೂಕು ಆಗಲಿದೆ. ಬೆಳಗಾವಿ ಮಹಾನಗರ ಪಾಲಿಕೆಗೆ 12 ಗ್ರಾಮ ಪಂಚಾಯತ್‍ಗಳನ್ನು ಸೇರ್ಪಡೆ ಮಾಡಲಾಗುವುದು ಎಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ