ಬೆಂಗಳೂರು: ಕಳೆದ ವರ್ಷ ಮಳೆ ಕೊರತೆಯಿಂದಾಗಿ ಭೀಕರ ಬರದಿಂದ ತತ್ತರಿಸಿದ ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯಾಗಿದೆ.
ಮುಂಗಾರು ಆರಂಭದಿಂದ ಈವರೆಗೆ ಸುರಿದ ಮಳೆ ಸಾಮಾನ್ಯ ಮಳೆಯಲ್ಲ. ಇದು ಕಳೆದ ಮೂರು ದಶಕದಲ್ಲಿ ಸುರಿದ ದಾಖಲೆಯ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಕಳೆದ ವರ್ಷ ಮುಂಗಾರು ಅವಧಿಯಲ್ಲಿ ವಾಡಿಕೆ ಪ್ರಮಾಣಕ್ಕಿಂತ ಶೇಕಡಾ.25ರಷ್ಟು ಮಳೆ ಕೊರತೆ ಉಂಟಾಗಿತ್ತು. ಇದರಿಂದ ರಾಜ್ಯದಲ್ಲಿ ಭೀಕರ ಬರಗಾಲ ಉಂಟಾಗಿತ್ತು. ಹಲವು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರಿಗೂ ಸಹ ಭಾರೀ ಸಮಸ್ಯೆ ಉಂಟಾಗಿತ್ತು. ಆದರೆ ಈ ಬಾರಿ ಮುಂಗಾರು ಅವಧಿಯಲ್ಲಿ ರಾಜ್ಯಾದ್ಯಂತ ಧಾರಾಕಾರ ಮಳೆಯಾಗಿದೆ.
ಜೂನ್‌ಮತ್ತು ಜುಲೈನಲ್ಲಿ ವಾಡಿಕೆಗಿಂತಲೂ ಅಧಿಕ ಮಳೆಯಾಗಿದ್ದು, 1994ರ ನಂತರ ಸುರಿದ ಅತೀ ಹೆಚ್ಚು ಹಾಗೂ ದಾಖಲೆಯ ಮಳೆ ಈ ವರ್ಷ ಆಗಿದೆ ಎಂದು ಅಂದಾಜಿಸಲಾಗಿದೆ.
ಒಟ್ಟಾರೆಯಾಗಿ ವಾಡಿಕೆ ಪ್ರಕಾರ ರಾಜ್ಯದಲ್ಲಿ 463 ಮಿ ಮೀ ಮಳೆಯಾಗಬೇಕು. ಆದರೆ ಈ ಬಾರಿ 593 ಮಿ.ಮೀ ಮಳೆಯಾಗುವ ಮೂಲಕ ಶೇಕಡಾ 28ರಷ್ಟು ಹೆಚ್ಚಿನ ಮಳೆಯಾಗಿದ್ದು, ಸಕ್ಕರೆ ನಾಡು ಮಂಡ್ಯದಲ್ಲಿ ವಾಡಿಕೆಗಿಂತ ಅತಿ ಹೆಚ್ಚು ಮಳೆಯಾಗಿದೆ ಎಂದು ಅಂದಾಜಿಸಲಾಗಿದೆ.
ರಾಜ್ಯದಲ್ಲಿ ಭಾರೀ ಮಳೆಯಾದ ಪರಿಣಾಮ ಜಲಾಶಯಗಳು ಕೂಡ ಸಂಪೂರ್ಣ ಭರ್ತಿಯಾಗಿವೆ. ಈ ಹಿನ್ನೆಲೆಯಲ್ಲಿ ಅನ್ನದಾತರಿಗೆ ತೀವ್ರ ಸಂತೋಷವಾಗಿದ್ದು, ಈ ಬಾರಿ ಉತ್ತಮ ಫಸಲು ಬರುವ ನಿರೀಕ್ಷೆಯಲ್ಲಿದ್ದಾರೆ.