Mysore
15
few clouds

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಅವರು ಹೀಗಂದ್ರು, ನೀವೇನು ಹೇಳ್ತೀರ? ಎನ್ನುವ ಪತ್ರಿಕೋದ್ಯಮದಿಂದ ಹೊರಬರಬೇಕಿದೆ

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಕರೆ 

ಕೊಪ್ಪಳ : ಪತ್ರಿಕೋದ್ಯಮ ಸಣ್ಣ ಪ್ರಮಾಣದಲ್ಲಿದ್ದಾಗ ಸಮಾಜದಲ್ಲಿ ದೊಡ್ಡ ದೊಡ್ಡ ಬದಲಾವಣೆಗಳಾಗಿವೆ. ಇಂದು ಇಷ್ಟು ದೊಡ್ಡ ಪ್ರಮಾಣದಲ್ಲಿರುವ ಪತ್ರಿಕೋದ್ಯಮದಿಂದ ಸಣ್ಣ ಬದಲಾವಣೆ ಕೂಡ ಸಾಧ್ಯವಾಗುತ್ತಿಲ್ಲ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಬೇಸರ ವ್ಯಕ್ತಪಡಿಸಿದರು.

ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಡಾ.ಬಿ.ಆರ್.ಅಂಬೇಡ್ಕರ್, ಡಿವಿಜಿ, ಪಿ.ರಾಮಯ್ಯ, ಪಾಟೀಲ್ ಪುಟಪ್ಪ ಸೇರಿ ಒಟ್ಟು 24 ಮಹನೀಯರ ಹೆಸರಿನಲ್ಲಿ ಇಂದು ದತ್ತಿನಿಧಿ ಪ್ರಶಸ್ತಿಗಳನ್ನು ಕೊಡಲಾಗುತ್ತಿದೆ. ಈ ಎಲ್ಲಾ ಮಹನೀಯರ ಕಾಲದಲ್ಲಿ ಪತ್ರಿಕೋದ್ಯಮ ಅತ್ಯಂತ ಸಣ್ಣ ಪ್ರಮಾಣದಲ್ಲಿತ್ತು. ಆದರೂ ಆ ಹೊತ್ತು ಬಹಳ ದೊಡ್ಡ ದೊಡ್ಡ ಬದಲಾವಣೆಗಳಿಗೆ ಕಾರಣವಾಗಿತ್ತು. ಈಗ ಈ ಮಹನೀಯರ ಹೆಸರಿನಲ್ಲಿ ದತ್ತಿನಿಧಿ ಪ್ರಶಸ್ತಿಗಳನ್ನು ಸ್ವೀಕರಿಸುತ್ತಿರುವ ಈ ಹೊತ್ತಿನಲ್ಲಿ ಪತ್ರಿಕೋದ್ಯಮ ವಿಪರೀತ ದೊಡ್ಡದಾಗಿ ಬೆಳೆದಿದೆ. ಆದರೆ ಸಣ್ಣ ಪ್ರಮಾಣದ ಬದಲಾವಣೆ ಕೂಡ ಸಾಧ್ಯವಾಗುತ್ತಿಲ್ಲ. ಇದು ಬಹಳ ಬೇಸರದ ಸಂಗತಿ ಎಂದರು.

ಈ ಮಹನೀಯರ ಹೆಸರುಗಳು ಕೇವಲ ದತ್ತಿನಿಧಿಗೆ ಮಾತ್ರ ಸೀಮಿತವಾಗಿ ಇವರ ನಿಷ್ಠುರ ವೃತ್ತಿಪರತೆ, ರಾಜಿ ರಹಿತ ಕಾಳಜಿಗಳು, ಮೌಲ್ಯಗಳು ನಾಪತ್ತೆಯಾಗಿರುವುದೂ ಬೇಸರ ತರಿಸುವುದಿಲ್ಲವೇ ಎಂದು ಪ್ರಶ್ನಿಸಿದರು.

ಹಿಂದೆಲ್ಲಾ ಪತ್ರಕರ್ತರು ರಾಜಕಾರಣಿಗಳನ್ನು ಬಹಳ ನಿಷ್ಠುರವಾಗಿ, ಬಹಳ ಜವಾಬ್ದಾರಿಯುತವಾಗಿ ಪ್ರಶ್ನಿಸುತ್ತಿದ್ದರು. ಇದರ ಪರಿಣಾಮ ರಾಜಕಾರಣಿಗಳು ಜವಾಬ್ದಾರಿಯುತವಾಗಿ ವರ್ತಿಸುತ್ತಿದ್ದರು.

ಆದರೆ, ಈಗ ರಾಜಕಾರಣಿಗಳು ಪತ್ರಕರ್ತರ ಜವಾಬ್ದಾರಿಗಳನ್ನು ಬಹಳ ನಿಷ್ಠುರವಾಗಿ ಪ್ರಶ್ನಿಸುವ ಸ್ಥಿತಿ ಬಂದಿದೆ. ಏಕೆಂದರೆ, ಇಂದಿನ ಮಾಧ್ಯಮ ಕ್ಷೇತ್ರಕ್ಕೆ ಜವಾಬ್ದಾರಿಯುತ ಪತ್ರಿಕೋದ್ಯಮವೇ ಮರೆತು ಹೋದಂತಿದೆ. ರಾಜಕಾರಣಿಗಳು, ಸಾಮಾಜಿಕ ಹೋರಾಟಗಾರರು ಪತ್ರಕರ್ತರು ಪತ್ರಿಕೋದ್ಯಮವನ್ನೇ ಬಹಳ ಗಂಭೀರವಾಗಿ ಆರೋಪಿ ಸ್ಥಾನದಲ್ಲಿ ನಿಲ್ಲಿಸುತ್ತಿದ್ದಾರೆ. ಹೈಕೋರ್ಟ್, ಸುಪ್ರೀಂಕೋರ್ಟ್ ಗಳೂ ಹೆಚ್ಚೂ ಕಡಿಮೆ ಪ್ರತೀ ತಿಂಗಳು ಒಂದಲ್ಲಾ ಒಂದು ಪ್ರಕರಣದಲ್ಲಿ ಪತ್ರಿಕೋದ್ಯಮಕ್ಕೆ ಚಾಟಿ ಬೀಸುತ್ತಲೇ ಇದ್ದಾರೆ. ಇವೆಲ್ಲಾ ಏನನ್ನು ಸೂಚಿಸುತ್ತಿದೆ ಎಂದು ಪ್ರಶ್ನಿಸಿದರು.

ಅವರು ಹೀಗಂದ್ರು, ನೀವೇನು ಹೇಳ್ತೀರ..ಎನ್ನುವ “Easy chair journalism” ನಿಂದ ಪತ್ರಕರ್ತರು ಹೊರಗೆ ಬರದಿದ್ದರೆ ಯಾರ ಹೆಸರಿನಲ್ಲಿ ದತ್ತಿನಿಧಿ ಕೊಡಲಾಗುತ್ತಿದೆಯೋ ಅವರ ಮೌಲ್ಯಗಳು ಉಳಿಯಲು ಸಾಧ್ಯವಿಲ್ಲ ಎಂದರು.

ಸ್ವಾತಂತ್ರ್ಯ ಪೂರ್ವದಲ್ಲಿ ಅಭಿವೃದ್ಧಿ ಪತ್ರಿಕೋದ್ಯಮ ಅತ್ಯಂತ ಆರೋಗ್ಯಕರವಾಗಿತ್ತು. ಆದರೆ, ಇಂದು ಕೇವಲ ಹೇಳಿಕೆ ಆಧಾರಿತ ವೃತ್ತಿ ಮಾತ್ರ ವಿಜ್ರಂಭಿಸುತ್ತಿದೆ. ಅಧ್ಯಯನಶೀಲತೆ ಕಡಿಮೆ ಆಗುತ್ತಿರುವುದು ಇದಕ್ಕೆ ಕಾರಣ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ಶಿವಾನಂದ ತಗಡೂರು ಅವರು ಅತ್ಯಂತ ಕ್ರಿಯಾಶೀಲರು. ಇದುವರೆಗೂ ನನ್ನ ಕೈಯಲ್ಲೇ ಸಾವಿರಕ್ಕೂ ಅಧಿಕ ಮಂದಿಗೆ ಪ್ರಶಸ್ತಿಗಳನ್ನು ಕೊಡಿಸಿದ್ದಾರೆ. ಪತ್ರಿಕಾ ವೃತ್ತಿಯಲ್ಲಿರುವ ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಪ್ರಶಸ್ತಿ ಕೊಡಿಸುವ ಮಹತ್ವಾಕಾಂಕ್ಷೆ ಇಟ್ಟುಕೊಂಡಿದ್ದಾರೆ. ಪ್ರಶಸ್ತಿ ಪುರಸ್ಕೃತರು ವೃತ್ತಿ ಘನತೆಯನ್ನು ಎತ್ತಿ ಹಿಡಿಯುವ ದಿಕ್ಕಿನಲ್ಲಿ ಮತ್ತಷ್ಟು ಕ್ರಿಯಾಶೀಲರಾಗುತ್ತಾರೆ ಎನ್ನುವ ವಿಶ್ವಾಸ ನನಗಿದೆ‌ ಎಂದರು.

KUWJ ಅಧ್ಯಕ್ಷರಾದ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಸಚಿವರಾದ ಶಿವರಾಜ ತಂಗಡಗಿ, ಶಾಸಕ ರಾಘವೇಂದ್ರ ಹಿಟ್ನಾಳ್, ಕೊಪ್ಪಳ ವಿವಿ ಕುಲಪತಿ ಬಿ.ಕೆ.ರವಿ, ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

Tags:
error: Content is protected !!