ದಾವಣಗೆರೆ: ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇರುವ ಏಕೈಕ ಬಂಡವಾಳ ಎಂದರೆ ಐದು ಗ್ಯಾರಂಟಿಗಳು ಮಾತ್ರ. ಅವುಗಳನ್ನು ಕೂಡ ಮನಸ್ಸು ಇಚ್ಛೆ, ಬೇಕಾಬಿಟ್ಟಿಯಾಗಿ ನೀಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಈ ಕುರಿತು ದಾವಣಗೆರೆಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹಲಕ್ಷ್ಮಿ ಹಣ ಬಾಕಿ ಉಳಿಸಿಕೊಂಡು ಎಲೆಕ್ಷನ್ ಬಂದಾಗ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುತ್ತಿದ್ದಾರೆ. ಉಳಿದಂತೆ ಸರ್ಕಾರದ ಸಾಧನೆ ಶೂನ್ಯ. ಕಳೆದ ಮೂರು ವರ್ಷಗಳಲ್ಲಿ ಇವರು ಮಾಡಿದ ಸಾಧನೆ ಏನೇನು ಇಲ್ಲ ಎನ್ನುವುದು ನನ್ನ ಸ್ಪಷ್ಟ ಅಭಿಪ್ರಾಯ. ಇನ್ನು ಎರಡು ತಿಂಗಳಿಗೆ ಈ ಸರ್ಕಾರ ನಾಲ್ಕನೇ ವರ್ಷಕ್ಕೆ ಕಾಲಿಡುತ್ತದೆ ಎಂದು ಹೇಳಿದರು.
ಕಳೆದ ಮೂರು ವರ್ಷಗಳಲ್ಲಿ ಈ ಸರ್ಕಾರ ಏನಾದರೂ ಸಾಧನೆ ಮಾಡಿದೆಯಾ ಎಂದು ಮಾಧ್ಯಮಗಳಲ್ಲಿ ದುರ್ಬೀನು ಹಾಕಿ ಹುಡುಕಿದರು ಏನೇನು ಸಿಗುವುದಿಲ್ಲ. ಗ್ಯಾರೆಂಟಿಗಳನ್ನು ಬಿಟ್ಟು ಉಳಿದಂತೆ ಏನು ಸಾಧನೆ ಮಾಡಿರುವುದು ತಿಳಿಯುವುದಿಲ್ಲ. ದೃಷ್ಯ ಮಾಧ್ಯಮಗಳನ್ನು ನೋಡಿದರೆ, ಪತ್ರಿಕೆಗಳನ್ನು ಓದಿದರೆ ಮುಖ್ಯಮಂತ್ರಿಗಳು ಕುರ್ಚಿಗೆ ಪ್ರಾಮುಖ್ಯತೆ ಕೊಟ್ಟಿರುವ ವರದಿಗಳಷ್ಟೇ ಕಣ್ಣಿಗೆ ಕಾಣುತ್ತದೆ. ಅದು ಬಿಟ್ಟರೆ ಭ್ರಷ್ಟಾಚಾರದ ಹಗರಣಗಳು ಹೆಜ್ಜೆ ಹೆಜ್ಜೆಗೂ ಗೋಚರವಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಪದೇ ಪದೇ ಮುಖ್ಯಮಂತ್ರಿಗಳು ಒಂದು ಮಾತು ಹೇಳುವುದನ್ನು ಗಮನಿಸಿದ್ದೇನೆ. ಕುಮಾರಸ್ವಾಮಿ ಅವರನ್ನು ನಾವು ಮುಖ್ಯಮಂತ್ರಿ ಮಾಡಿದ್ದೆವು. ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಸಮೀಕ್ಷೆ ನಡೆಸಲು ನೇಮಿಸಲಾಗಿದ್ದ ಕಾಂತರಾಜು ಆಯೋಗದ ವರದಿಯನ್ನು ಸ್ವೀಕರಿಸದೆ ಅದನ್ನು ಕುಮಾರಸ್ವಾಮಿ ತಡೆದು ಹಿಡಿದುಬಿಟ್ಟರು ಎಂದು ದೂರುತ್ತಿದ್ದಾರೆ. ಈ ವಿಷಯ ಇಟ್ಟುಕೊಂಡು ಅವರು ನನ್ನ ಮೇಲೆ ನಿರಂತರವಾಗಿ ಆರೋಪ ಮಾಡುತ್ತಿದ್ದಾರೆ. ನಾನು ಮುಖ್ಯಮಂತ್ರಿಗಳನ್ನು ಕೇಳುವುದು ಇಷ್ಟೇ, ಕಾಂತರಾಜು ವರದಿ ಈಗ ನಿಮ್ಮ ಬಳಿಯೇ ಇದೆ. ಆಮೇಲೆ ಜಯಪ್ರಕಾಶ ಹೆಗಡೆ ಅವರ ವರದಿಯು ಸ್ವೀಕರಿಸಿದ್ದೀರಿ. ಅದನ್ನು ಎಷ್ಟು ದಿನವೆಂದು ನಿಮ್ಮ ಬಳಿ ಇಟ್ಟುಕೊಳ್ಳುತ್ತೀರಿ? ಎರಡು ವರದಿಗಳನ್ನು ಇನ್ನೂ ಯಾಕೆ ಇನ್ನು ಸ್ಟೋರೇಜ್ ನಲ್ಲಿ ಇಟ್ಟುಕೊಂಡಿದ್ದೀರಿ? ಯಾಕೆ ವರದಿಗಳನ್ನು ಇನ್ನು ಬಿಡುಗಡೆ ಮಾಡಿಲ್ಲ? ಅಹಿಂದ ನಾಯಕ ಎನ್ನುವ ನೀವು ಅವುಗಳನ್ನು ಹೊರಕ್ಕೆ ತಂದು ಇನ್ನೂ ಅವಕಾಶ ವಂಚಿತ ಸಮುದಾಯಗಳಿಗೆ ಅನುಕೂಲ ಯಾಕೆ ಮಾಡಿಕೊಡುತ್ತಿಲ್ಲ ಎಂದು ಮುಖ್ಯಮಂತ್ರಿಗಳನ್ನು ಸಚಿವ ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.





