ಬೆಂಗಳೂರು: ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದು ಒಂದು ಲಕ್ಷ ಲೀಡ್ʼನಲ್ಲಿ ನೀವು ಗೆದ್ದಾಗ ಅಕ್ರಮ ನಡೆದಿರಲಿಲ್ಲವೇ? ಎಂದು ಜೆಡಿಎಸ್ ಪಕ್ಷವು ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಪ್ರಶ್ನಿಸಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್ ಪಕ್ಷವು, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಅಕ್ರಮ ನಡೆದಿದೆ ಎಂದು ಹೇಳುವ ಡಿಕೆಶಿ ಅವರೇ, ಕೇರಳದ ವಯನಾಡು ಮತ್ತು ಉತ್ತರ ಪ್ರದೇಶದ ಅಮೇಥಿಯಲ್ಲೂ ಅಕ್ರಮ ನಡೆದಿರಬೇಕಲ್ಲವೇ? ಎಂದು ಕೇಳಿದೆ.
2023ರ ರಾಜ್ಯ ವಿಧಾನಸಭಾ ಚುನಾವಣೆ ವೇಳೆ, ಫಲಿತಾಂಶಕ್ಕೂ ಒಂದು ತಿಂಗಳ ಮೊದಲೇ ಕಾಂಗ್ರೆಸ್ ಪಕ್ಷ 136 ಸೀಟುಗಳನ್ನು ಪಡೆಯುತ್ತದೆ ಎಂದು ತಾವು ಪದೇ ಪದೇ ಹೇಳುತ್ತಿದ್ದರಲ್ಲ. ಅದು ಹೇಗೆ ಅಷ್ಟು ನಿಖರವಾಗಿ ಹೇಳಲು ಸಾಧ್ಯ? ಇಲ್ಲೂ ಗೋಲ್ಮಾಲ್ ನಡೆದಿರಬೇಕಲ್ಲವೇ ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನು ಪ್ರಶ್ನಿಸಿದೆ?
ಚುನಾವಣೆಯಲ್ಲಿ ಗೆದ್ದಾಗ ಜನಾಶೀರ್ವಾದ ಎಂದು ಸಂಭ್ರಮಿಸುವ ಕಾಂಗ್ರೆಸ್ಸಿಗರೇ, ಸೋತಾಗ ಮಾತ್ರ ಚುನಾವಣಾ ಅಕ್ರಮ ಎಂದು ಬೊಬ್ಬೆ ಹಾಕಿ ಮೊಸಳೆ ಕಣ್ಣೀರು ಸುರಿಸುವುದು ಅಭ್ಯಾಸವಾಗಿದೆ. ಕಾಂಗ್ರೆಸ್ಸಿಗರು ಸದಾ ಚುನಾವಣಾ ಆಯೋಗವನ್ನು ದೂರುವುದು ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಮಾಡುವ ಅಪಮಾನ ಎಂದು ಆರೋಪಿಸಿದೆ.




