Mysore
23
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಸೌಹಾರ್ದತೆ ಇರಬೇಕು: ಆರ್.‌ ಅಶೋಕ್

ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಸಂಘರ್ಷದ ಬದಲು ಸೌಹರ್ದತೆ ಇರಬೇಕು ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಸಿಎಂ ಸಿದ್ದರಾಮಯ್ಯಗೆ ಕಿವಿಮಾತು ಹೇಳಿದರು.

ಇಂದು( ಜೂ.27) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದೊಂದಿಗೆ ಯಾವಾಗಲೂ ಸಂಘರ್ಷ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಯಲ್ಲಿ ಸಂಸದರೊಂದಿಗೆ ಕಾಟಾಚಾರದ ಸಭೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಪ್ರತಿ ದಿನ ಟೀಕಿಸಿ ಈಗ ಸಭೆ ಮಾಡುತ್ತಿದ್ದಾರೆ. ಅಧಿಕಾರ ಇಂದು ಬರುತ್ತದೆ, ಮುಂದೆ ಹೋಗುತ್ತದೆ. ಹೀಗೆ ಸಂಘರ್ಷ ಮಾಡಿಕೊಳ್ಳಲು ಇದು ಭಾರತ-ಪಾಕಿಸ್ತಾನ ಅಲ್ಲ. ಕರ್ನಾಟಕದಲ್ಲಿ ಯಾವುದೇ ಪಕ್ಷ ದೀರ್ಘವಾಗಿ ಆಡಳಿತ ನಡೆಸಿಲ್ಲ. ಇದು ಬದಲಾಗುತ್ತಲೇ ಇರುತ್ತದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ನೀಡಿರುವ ಹಣವನ್ನೇ ಖರ್ಚು ಮಾಡಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಈ ಭ್ರಷ್ಟ, ದುಷ್ಟ ಸರ್ಕಾರದ ವಿರುದ್ಧ ನಾವು ಹೋರಾಟ ಮಾಡಿಯೇ ಒಬ್ಬ ಸಚಿವರನ್ನು ಬೀಳಿಸಿದ್ದೇವೆ. ಮುಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಬೀಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಪೆಟ್ರೋಲ್‌ ದರ ಏರಿಕೆ, ಹಾಲಿನ ದರ ಏರಿಕೆ, ಸ್ಟಾಂಪ್‌ ಡ್ಯೂಟಿ, ಹೀಗೆ ಎಲ್ಲ ದರ ಏರಿಕೆಗೂ ಕಾಂಗ್ರೆಸ್‌ ನಾಯಕರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಬಡವರು ಕುಡಿಯುವ ಮದ್ಯದ ದರ ಏರಿಸಿ, ಶ್ರೀಮಂತರ ಮದ್ಯಗಳ ದರ ಇಳಿಕೆ ಮಾಡಿದ್ದಾರೆ. ಇದೇ ಸರ್ಕಾರ ಇನ್ನೂ ಅಧಿಕಾರದಲ್ಲಿ ಇದ್ದರೆ ಕರ್ನಾಟಕದ ಹಣ ಕೊಳ್ಳೆ ಹೊಡೆದು ದೆಹಲಿಗೆ ತೆಗೆದುಕೊಂಡು ಹೋಗುತ್ತದೆ. ಇವರೆಲ್ಲರೂ ಆಲಿಬಾಬ ಮತ್ತು ನಲ್ವತ್ತು ಕಳ್ಳರು ಎಂದರು.

ಈಗ ಹಾಲು ದರ ಏರಿಕೆಯಿಂದ ಹಾಲಾಹಲ ಆಗಿದೆ. ದೇಶಕ್ಕೆ ಅರ್ಥಶಾಸ್ತ್ರದ ಪಾಠ ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು 50 ಮಿಲಿ ಲೀಟರ್‌ ಹಾಲು ಕಡಿಮೆ ನೀಡಿ ಎರಡು ರೂಪಾಯಿ ಕಡಿಮೆ ಮಾಡಲಿ. ಹಾಲು ಜಾಸ್ತಿ ಕೊಡಿ ಎಂದು ಮುಖ್ಯಮಂತ್ರಿಗಳ ಬಳಿ ಯಾರೂ ಅರ್ಜಿ ಕೊಟ್ಟಿಲ್ಲ. ಮಳೆಗಾಲ ಬಂದಾಗ ಮೇವು ಹೆಚ್ಚಾಗಿ ಹಾಲು ಹೆಚ್ಚಳವಾಗುವುದು ಸಹಜ. ಅದನ್ನು ಪುಡಿ ಮಾಡುವುದು, ಅಂಗನವಾಡಿಗೆ ಕೊಡುವುದು, ರಫ್ತು ಮಾಡುವುದು ಮೊದಲಾದ ಕ್ರಮಗಳನ್ನು ಸರ್ಕಾರ ಅನುಸರಿಸಬೇಕಿತ್ತು. ಮುಖ್ಯಮಂತ್ರಿಗೆ ಸಹಾಯ ಮಾಡುವ ಬುದ್ಧಿ ಇಲ್ಲ, ಆದರೆ ದುಡ್ಡು ಹೊಡೆಯುವ ಬುದ್ಧಿ ಇದೆ. ಜನರು ಸರ್ಕಾರಕ್ಕೆ ಕಪಾಳಕ್ಕೆ ಬಾರಿಸಬೇಕಿದೆ. 15 ಬಜೆಟ್‌ ಮಂಡಿಸಿದ ಸಿದ್ದರಾಮಯ್ಯನವರ ಅರ್ಥಶಾಸ್ತ್ರ ಇದೇ ಎಂದು ಟೀಕಿಸಿದರು.

Tags: