ಬೆಂಗಳೂರು : ಪಹಲ್ಗಾಮ್ ದಾಳಿಯ ನಂತರದ ಬೆಳವಣಿಗೆಗಳ ಬಗ್ಗೆ ಕೇಂದ್ರ ಸರ್ಕಾರ ಉತ್ತರ ನೀಡಿದೆ. ಅಷ್ಟು ಬಹಿರಂಗವಾಗಿ ಭಯೋತ್ಪಾದಕ ದಾಳಿಯಾಗಲು ಅವಕಾಶ ಮಾಡಿಕೊಟ್ಟಿದ್ದೇಕೆ ಎಂಬ ಬಗ್ಗೆ ಈವರೆಗೂ ಉತ್ತರ ದೊರೆತಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುಲ್ವಾಮದಲ್ಲಿ 40 ಸೈನಿಕರ ಸಾವಿನ ಬಗ್ಗೆ ಈವರೆಗೂ ಸ್ಪಷ್ಟತೆ ಇಲ್ಲ. ಆರೋಪಿಗಳ್ಯಾರು ಎಂಬುದನ್ನು ತಿಳಿಸಲಾಗಿಲ್ಲ. ಇತ್ತೀಚೆಗೆ ನಡೆದ ಪಹಲ್ಗಾಮ್ ದಾಳಿಯ ಬಗ್ಗೆಯೂ ನಿಖರತೆ ಇಲ್ಲವಾಗಿದೆ. ಯಾವುದಕ್ಕೂ ಕೇಂದ್ರ ಸರ್ಕಾರ ಉತ್ತರ ನೀಡುತ್ತಿಲ್ಲ. ಎಷ್ಟು ವಿಮಾನಗಳು ನಾಶವಾದವು ಎಂಬುದು ಈವರೆಗೂ ಅಸ್ಪಷ್ಟತೆಯಿಂದಲೇ ಕೂಡಿದೆ ಎಂದರು.
ಕದನ ವಿರಾಮಕ್ಕೆ ತಾವು ಕಾರಣ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳುತ್ತಿದ್ದಾರೆ. ಪಾಕಿಸ್ತಾನ ಭಾರತದ 5 ವಿಮಾನಗಳನ್ನು ಹೊಡೆದುರುಳಿಸಿರುವುದಾಗಿ ತಿಳಿಸಿದೆ. ಇದ್ಯಾವುದನ್ನೂ ಕೇಂದ್ರ ಸರ್ಕಾರ ನಡೆದಿದೆ ಅಥವಾ ನಡೆದಿಲ್ಲ ಎಂದು ಖಚಿತವಾಗಿ ಮಾತನಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.




