ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಯಾವುದೇ ಭಿನ್ನಭಿಪ್ರಾಯವಿಲ್ಲ ಯಾವ ಒಪ್ಪಂದವೂ ಇಲ್ಲ. ನಮ್ಮಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ, ಹೈಕಮಾಂಡ್ ಜೊತೆ ಇಬ್ಬರು ವಿಶ್ವಾಸದಲ್ಲಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ಇಂದು (ಜ.13) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಸ್ಥ. ಡಿ.ಕೆ.ಶಿವಕುಮಾರ್ ಪಕ್ಷದ ಮುಖ್ಯಸ್ಥ. ಅಧಿಕಾರಕ್ಕಾಗಿ ನಮ್ಮಲ್ಲಿ ಯಾವುದೇ ಜಗಳವಿಲ್ಲ. ಎಲ್ಲರೂ ಒಟ್ಟಾಗಿ ಇದ್ದೇವೆ ಎಂದು ತಿಳಿಸಿದರು.
ಇನ್ನು ನಾನು ಪಕ್ಷದ ಹಿರಿಯನಿದ್ದೇನೆ. 9 ಬಾರಿ ವಿಧಾನಸಭೆ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಲ್ಲ. ಸಮಯ ಬಂದರೆ ನೋಡೋಣ ಎಂದರು.
ದಲಿತ ಸಚಿವರ ಔತಣಕೂಟ ಸಭೆಯ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಭೆ ಮಾಡುವುದರಲ್ಲಿ ತಪ್ಪೇನಿದೆ? ಸಚಿವರಾಗಲಿ, ಶಾಸಕರಾಗಲಿ, ಯಾರೇ ಆಗಲಿ ಔತಣಕೂಟ ಸಭೆ ಮಾಡುವುದು ಅವರಿಷ್ಟ. ಅದಕ್ಕೂ ರಾಜಕೀಯಕ್ಕೂ ಸಂಬಂಧವೇನು? ಎಂದು ಮಾಧ್ಯಮದವರನ್ನೇ ಪ್ರಶ್ನೆ ಮಾಡಿದರು.





