‘ಶಿವಣ್ಣ 131’ ಚಿತ್ರವು ವರಮಹಾಲಕ್ಷ್ಮೀ ಹಬ್ಬದಂದು ಪ್ರಾರಂಭವಾಗಲಿದೆ ಎಂದು ಚಿತ್ರದ ನಿರ್ಮಾಪಕ ಸುಧೀರ್ ಮೊದಲೇ ಹೇಳಿದ್ದರು. ಅದರಂತೆ ಶುಕ್ರವಾರ ಹಬ್ಬದ ಪ್ರಯುಕ್ತ ಚಿತ್ರ ಅಧಿಕೃತವಾಗಿ ಪ್ರಾರಂಭವಾಗಿದ್ದು, ಚಿತ್ರೀಕರಣ ಶುರುವಾಗಿದೆ.
ಕಂಠೀರವ ಸ್ಟುಡಿಯೋದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ಮೊದಲ ದೃಶ್ಯಕ್ಕೆ ನಿರ್ಮಾಪಕ ಎಸ್.ಎನ್. ರೆಡ್ಡಿ ಕ್ಲ್ಯಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದ್ದಾರೆ.
ಈ ಚಿತ್ರದ ಕಥೆಯನ್ನು ನಿರ್ದೇಶಕ ಕಾರ್ತಿಕ್ ಅದ್ವೈತ್ ಎರಡು ವರ್ಷಗಳ ಹಿಂದೆಯೇ ಹೇಳಿದ್ದರಂತೆ. ಆದರೆ, ಇನ್ನೂ ಏನೋ ಬೇಕು ಅಂತನಿಸಿದ್ದರಿಂದ ಚಿತ್ರ ತಡವಾಗಿದೆ. ‘ಕಥೆ ಚೆನ್ನಾಗಿತ್ತು. ಆದರೆ, ಅದರಲ್ಲಿ ಇನ್ನೇನೋ ಬೇಕು ಅಂತನಿಸುತ್ತಿತ್ತು. ಅದನ್ನು ಹುಡುಕುವ ಪ್ರಯತ್ನವಾಗುತ್ತಿತ್ತು. ಈಗ ಕಥೆ ಎಲ್ಲರಿಗೂ ಇಷ್ಟವಾಗುವಂತಿವೆ. ಸಾಮಾನ್ಯವಾಗಿ ಒಂದು ಚಿತ್ರ ನೋಡಿ ಇದು ಕಲಾವಿದರ ಚಿತ್ರ, ತಂತ್ರಜ್ಞರ ಚಿತ್ರ ಎಂದು ವಿಭಾಗ ಮಾಡುತ್ತೇವೆ. ಆದರೆ, ಈ ಚಿತ್ರದಲ್ಲಿ ಎಲ್ಲರಿಗೂ ಕೆಲಸವಿದೆ. ಬರೀ ಕಲಾವಿದರಷ್ಟೇ ಅಲ್ಲ, ತಂತ್ರಜ್ಞರಿಗೆ ಹೆಚ್ಚಿನ ಕೆಲಸವಿದೆ. ಹಾಗಾಗಿ, ಇದು ಇದು ಯಾರಿಗೋ ಒಬ್ಬರಿಗೆ ಸಂಬಂಧಿಸಿದ ಚಿತ್ರವಲ್ಲ, ಎಲ್ಲರಿಗೂ ಕೆಲಸವಿರುವ ಚಿತ್ರ. ಇದು ಎಲ್ಲರ ಚಿತ್ರ. ಎಲ್ಲರ ಶ್ರಮ ಚಿತ್ರದಲ್ಲಿ ನೋಡಬಹುದು’ ಎಂದರು.
ಇಲ್ಲಿ ಪ್ರತಿಯೊಂದು ಪಾತ್ರವೂ ಬಹಳ ಮುಖ್ಯ ಎನ್ನುವ ಶಿವಣ್ಣ, ‘ಇದೇ ಮೊದಲ ಬಾರಿಗೆ ನವೀನ್ ಶಂಕರ್ ಜೊತೆಗೆ ಕೆಲಸ ಮಾಡುತ್ತಿದ್ದೇನೆ. ಮಧು ಗುರುಸ್ವಾಮಿ ಸಹ ಒಂದು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಚಿತ್ರದಲ್ಲಿ ಬಹಳ ಪಾತ್ರಗಳಿವೆ. ಇದೆಲ್ಲದರ ಜೊತೆಗೆ ಚಿತ್ರದಲ್ಲಿ ಇನ್ನೊಂದು ಸರ್‍ಪ್ರೈಸ್ ಪಾತ್ರವಿದೆ. ಆ ಪಾತ್ರವನ್ನು ಯಾರು ಮಾಡುತ್ತಾರೆ ಎಂದು ಇನ್ನೂ ನಿರ್ಧಾರವಾಗಿಲ್ಲ. ಬೇರೆ ಭಾಷೆಯ ನಟರು ನಟಿಸುವ ಸಾಧ್ಯತೆ ಇದೆ’ ಎಂದರು.
ಚಿತ್ರದ ಕಥೆ ಹೇಳದಿದ್ದರೂ, ಯಾವ ತರಹ ಇರಬಹುದು ಎಂದು ಸೂಚಿಸಿದ ಅವರು, ‘ನಾವು ಕೆಲವರನ್ನು ದೇವರೆಂದು ನಂಬುತ್ತೇವೆ. ಆದರೆ, ದೇವರಿಗೂ ಒಬ್ಬ ದೇವರು ಬೇಕು. ಹಾಗಾಗಿ, ದೇವರ ಹಿಂದೆಯೂ ಒಬ್ಬ ದೇವರಿರುತ್ತಾರೆ. ಇದು ಒಂದೆಳೆಯ ಕಥೆ. ಯಾರು ಏನೇ ಮಾಡಿದರೂ ಅವರ ಹಿಂದೊಂದು ಶಕ್ತಿ ಕೆಲಸ ಮಾಡುತ್ತಿರುತ್ತದೆ ಎಂಬುದನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ ‘ ಎಂದರು.
‘ಶಿವಣ್ಣನ 131’ ಒಂದು ಆ್ಯಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಶಿವರಾಜಕುಮಾರ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಭುವನೇಶ್ವರಿ ಪ್ರೊಡಕ್ಷನ್ ಬ್ಯಾನರ್‍ನಡಿ ಎಸ್.ಎನ್. ರೆಡ್ಡಿ ಹಾಗೂ ಸುಧೀರ್ ಪಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಒಂದು ತಮಿಳು ಚಿತ್ರ ನಿರ್ದೇಶಿಸಿದ್ದ ಕಾರ್ತಿಕ್ ಅದ್ವೈತ್ ಕಥೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡುತ್ತಿದ್ದಾರೆ.
‘ಘೋಸ್ಟ್’ ಖ್ಯಾತಿಯ ವಿ.ಎಂ. ಪ್ರಸನ್ನ ಹಾಗೂ ‘ಸೀತಾರಾಮಂ’ ಖ್ಯಾತಿಯ ಜಯಕೃಷ್ಣ ಚಿತ್ರಕಥೆ ಬರೆಯುತ್ತಿದ್ದಾರೆ. ‘ವಿಕ್ರಂ ವೇದ’ ಮತ್ತು ‘ಖೈದಿ’ ಸಿನಿಮಾ ಖ್ಯಾತಿಯ ಸ್ಯಾಮ್ ಸಿ.ಎಸ್ ಸಂಗೀತ, ಎ.ಜೆ. ಶೆಟ್ಟಿ ಛಾಯಾಗ್ರಹಣ ಈ ಚಿತ್ರಕ್ಕಿದೆ.