ಬೆಂಗಳೂರು : ಒರಿಜಿನಲ್ ಹುಲಿ ಉಗುರನ್ನು ಜೆಡಿಎಸ್ ನ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಹೊಂದಿದ್ದಾರೆ ಎಂಬ ಆರೋಪಗಳು ಬರುತ್ತಿದ್ದಂತೆ ಅವರು ಸೋಷಿಯಲ್ ಮೀಡಿಯಾ ಮೂಲಕ ಸ್ಪಷ್ಟನೆ ನೀಡಿದ್ದರು.
ನಂತರ ಎಚ್ ಡಿ ಕುಮಾರಸ್ವಾಮಿಯವರು ಜೆ ಪಿ ನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ಮೂಲಕ ಸಹ ಸ್ಪಷ್ಟನೆ ನೀಡಿದರು. ಹುಲಿ ಉಗುರು ರೀತಿಯಲ್ಲಿರುವ ಪೆಂಟೆಂಟ್ ನೈಜವಲ್ಲ. ಅದನ್ನು ಅರಣ್ಯಾಧಿಕಾರಿಗಳು ಪರಿಶೀಲನೆ ಮಾಡಲು ತೆಗೆದುಕೊಂಡು ಹೋಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳು, ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ತಮ್ಮ ನಿವಾಸಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪೆಂಡೆಂಟ್ ನ್ನು ಪರಿಶೀಲನೆ ನಡೆಸಿದ ನಂತರ ಅವರು ಸ್ಪಷ್ಟನೆ ನೀಡಿದ್ದಾರೆ. ಇವತ್ತು ಬೆಳಗ್ಗಿನಿಂದ ಚಿತ್ರ ನಟರು, ಜ್ಯೋತಿಷಿಗಳು ಇಟ್ಟಿರುವ ಹುಲಿ ಉಗುರುಗಳ ಪೆಂಡೆಂಟುಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ನನ್ನ ಪುತ್ರ ನಿಖಿಲ್ ಕುಮಾರಸ್ವಾಮಿ ಹೆಸರು ಈ ವಿಷಯದಲ್ಲಿ ಕೇಳಿ ಬಂದಿದೆ.
ನಿಖಿಲ್ ಮದುವೆ ಸಂದರ್ಭದಲ್ಲಿ ಕೊರಳಿಗೆ ಹಾಕಿದ್ದ ಪೆಂಡೆಂಟ್ ಅದು. ನಿಖಿಲ್ ಹೆಸರು ಬಂದ ಬಳಕ ಸ್ವತಃ ನಾನೇ ಅರಣ್ಯಾಧಿಕಾರಿಗಳಿಗೆ ಕರೆ ಮಾಡಿ ಬಂದು ಪರಿಶೀಲನೆ ಮಾಡಿಕೊಳ್ಳಿ, ನಿಮಗೆ ಮುಜುಗರ ಆಗಬಾರದು. ಈ ರಾಜ್ಯದಲ್ಲಿ ನ್ಯಾಯ ಎನ್ನುವುದು ಎಲ್ಲರಿಗೂ ಒಂದೇ ಎಂದು ತಿಳಿಸಿದ್ದೆ. ಅದರಂತೆ ಬಂದು ಪರಿಶೀಲನೆ ನಡೆಸಿದ್ದಾರೆ ಎಂದರು.
ತಪ್ಪಿದ್ದರೆ ಕ್ರಮ ತೆಗೆದುಕೊಳ್ಳಲು ಯಾವುದೇ ತೊಂದರೆ ಇಲ್ಲ. ನೀವು ಬಂದು ಪರಿಶೀಲನೆ ಮಾಡಿ ಅಂದೆ. ಅದರಂತೆ ಅಧಿಕಾರಿಗಳು ಬಂದು ಮಹಜರ್ ಮಾಡಿದ್ದಾರೆ. ನಾನೇ ಅಧಿಕಾರಿಗಳ ಜತೆಯಲ್ಲಿ ಚಿನ್ನದ ಅಂಗಡಿಗೆ ಅದನ್ನು ಕಳಿಸುತ್ತಿದ್ದೇನೆ. ಅದನ್ನು ಬಿಚ್ಚಿ ತೆಗೆದುಕೊಂಡು ಹೋಗಲಿಕ್ಕೆ ಸಹಕಾರ ಕೊಟ್ಟಿದ್ದೇನೆ. ನಮ್ಮ ಬಳಿ ಇರುವ ಹುಲಿ ಉಗುರು ರೀತಿಯ ಪೆಂಡೆಂಟ್ ಸಿಂಥೆಟಿಕ್ʼನದು. ಸಾಕಷ್ಟು ಜನರ ಬಳಿ ಇಂಥ ಪೆಂಡೆಂಟ್ ಇರುತ್ತದೆ ಎಂದು ಅವರು ತಿಳಿಸಿದರು.
ನಾನು ಬಹಳಷ್ಟು ಸಿನಿಮಾಗಳಲ್ಲಿ ನೋಡಿದ್ದೀನಿ, ನಟರು ಇಂಥ ಪೆಂಡೆಂಟ್ ಧರಿಸಿರುತ್ತಾರೆ. ನಾನು ಕೂಡ ಸಿನಿಮಾ ನಿರ್ಮಾಪಕನೇ. ಅನೇಕರು ಸ್ಟೈಲ್ ಆಗಿದೆ ಎಂದು ಧರಿಸುತ್ತಾರೆ. ನಿಖಿಲ್ ಅವರ ಮದುವೆಯಲ್ಲಿ ಯಾರೋ ಉಡುಗೊರೆ ಕೊಟ್ಟರು ಅಂತ ಹಾಕಿದ್ದು ಬಿಟ್ಟರೆ ಅದು ಬೀರುವಿನಲ್ಲಿ ಬಿದ್ದಿತ್ತು ಎಂದು ಅವರು ಹೇಳಿದರು.
ವನ್ಯಜೀವಿ ಸಂಕ್ಷರಣಾ ಕಾಯ್ದೆ ಬಗ್ಗೆ ನಮಗೂ ಗೊತ್ತಿದೆ. ಅಂಥ ವಸ್ತುಗಳನ್ನು ಇಟ್ಟುಕೊಳ್ಳುವುದು ಕಾನೂನು ಬಾಹಿರ ಎನ್ನುವ ಅರಿವು ನಮಗಿದೆ. ನಾವು ಅಂಥಾ ಕೆಲಸ ಮಾಡುವುದಿಲ್ಲ. ಹೀಗಾಗಿ ನಮಗೆ ಯಾವುದೇ ಗಾಬರಿ ಇಲ್ಲ, ಆತಂಕ ಇಲ್ಲ. ಅಧಿಕಾರಿಗಳು ಎಫ್.ಎಸ್.ಎಲ್ʼಗೆ ಕಳಿಸಿ ವಾಸ್ತವಾಂಶ ಪತ್ತೆ ಹಚ್ಚಲಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.