ಹುಬ್ಬಳ್ಳಿ: ದೀಪಾವಳಿ ಹಬ್ಬದ ಒಳಗಾಗಿಯೇ ರಾಜ್ಯ ಸರ್ಕಾರ ಢಮಾರ್ ಎನ್ನಲಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೀಪಾವಳಿ ಒಳಗೆ ಸಿದ್ದರಾಮಯ್ಯ ಸರ್ಕಾರ ಬೀಳಲಿದ್ದು, ಕಾಂಗ್ರೆಸ್ ಸರ್ಕಾರಕ್ಕೆ ಟೈಮ್ ಬಾಂಬ್ ಫಿಕ್ಸ್ ಆಗಿದೆ. ಎಲ್ಲರೂ ಸಂಕ್ರಾಂತಿ ಹಬ್ಬಕ್ಕೂ ಮುಂಚೆ ಸರ್ಕಾರ ಬಿದ್ದು ಹೋಗುತ್ತೆ ಎನ್ನುತ್ತಿದ್ದರು. ಆದ್ರೆ ದೀಪಾವಳಿ ಹಬ್ಬದ ಒಳಗಾಗಿಯೇ ಸರ್ಕಾರ ಪತನವಾಗಲಿದೆ ಎಂದರು.
ಇನ್ನು ಹೊಸ ಸಿಎಂ ಅಷ್ಟೆನಾ ಅಥವಾ ಹೊಸ ಸರ್ಕಾರ ಬರುತ್ತೋ ಎಂಬುದನ್ನು ಕಾಲವೇ ನಿರ್ಣಯ ಮಾಡುತ್ತದೆ. ಒಟ್ಟಿನಲ್ಲಿ ಸಿದ್ದರಾಮಯ್ಯ ಸಿಎಂ ಹುದ್ದೆಯಿಂದ ಇಳಿಯೋದು ಫಿಕ್ಸ್ ಆಗಿದೆ. ಈಗಾಗಲೇ ಸಿಎಂ ಕುರ್ಚಿಗೆ ಪೈಪೋಟಿ ಶುರುವಾಗಿದ್ದು, ಡಜನ್‌ಗೂ ಹೆಚ್ಚು ಜನ ಸಿಎಂ ಆಕಾಂಕ್ಷಿಗಳಾಗಿದ್ದಾರೆ ಎಂದು ಲೇವಡಿ ಮಾಡಿದರು.
ಇನ್ನು ರಾಜ್ಯ ಸರ್ಕಾರದಲ್ಲಿ ಹಲವು ಹಗರಣಗಳು ನಡೆದಿರೋದು ಸ್ಪಷ್ಟವಾಗಿದೆ. ಪ್ರತಿನಿತ್ಯ ಕಾಂಗ್ರೆಸ್ ಸರ್ಕಾರದಲ್ಲಿ ಹಗರಣಗಳೇ ಸುದ್ದಿಯಾಗುತ್ತಿವೆ. ಇದೊಂದು ಭ್ರಷ್ಟಾಚಾರ ತುಂಬಿದ ಸರ್ಕಾರವಾಗಿದ್ದು, ಉಪ್ಪು ತಿಂದವರು ನೀರು ಕುಡಿಯಲೇಬೇಕು. ಭ್ರಷ್ಟಾಚಾರ ಮುಚ್ಚಿ ಹಾಕಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಸತ್ಯ ಯಾವತ್ತಾದರೂ ಹೊರಗೆ ಬರಲೇಬೇಕು. ಆದ್ದರಿಂದ ಭ್ರಷ್ಟರು ಬಹಳ ದಿನ ಅಧಿಕಾರದಲ್ಲಿ ಇರಬಾರದು ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದರು.