ಬೆಂಗಳೂರು : ರಾಜ್ಯಸಭಾ ಚುನಾವಣೆಯ ಫಲಿತಾಂಶದ ಬಳಿಕ ಕಾಂಗ್ರೆಸ್ ಪಕ್ಷದ ವಿಜೇತ ಅಭ್ಯರ್ಥಿ ನಾಸಿರ್ ಹುಸೇನ್ ವಿಜಯೋತ್ಸವದ ಸಂದರ್ಭದಲ್ಲಿ ಘೋಷಣೆಯ ವಿಡಿಯೋ ತಿರುಚಿಲ್ಲ ಎಂದು ಎಫ್‌ಎಸ್‌ಎಲ್ ವರದಿ ಖಚಿತಪಡಿಸಿದೆ.
ಈ ಕುರಿತು ಹಲವರ ದನಿ ಪರೀಕ್ಷೆಗೆ ಮುಂದಾಗಿರುವ ಪೊಲೀಸರು ಆರೋಪಿಯ ಬಂಧನಕ್ಕೆ ಸಿದ್ದತೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟಾರೆ ಇಪ್ಪತ್ತಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಬಳಿಕ ಒಂಬತ್ತು ಮಂದಿಯ ದ್ವನಿಯ ಮಾದರಿಯನ್ನು ಮುದ್ರೀಕರಿಸಿಕೊಂಡು ವಿಡಿಯೋದಲ್ಲಿರುವ ದನಿಯೊಂದಿಗೆ ತಾಳೆ ಮಾಡಲಾಗಿತ್ತು.
ಎಫ್‌ಎಸ್‌ಎಲ್‌ಗೆ ನೀಡಲಾಗಿದ್ದ ವಿಡಿಯೋವನ್ನು ಮಾರ್ಫ್ ಅಥವಾ ಎಡಿಟ್ ಮಾಡಿಲ್ಲವೆಂದು ಖಚಿತಪಡಿಸಲಾಗಿದೆ. ಆರೋಪ ಸಾಬೀತಾದರೆ ಆರೋಪಿಯ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು. ಯಾವ ಕಾರಣಕ್ಕೂ ಅವರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಶುಕ್ರವಾರ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು.