ಬೆಂಗಳೂರು: ಪಂಚರಾಜ್ಯ ಚುನಾವಣೆಯಲ್ಲಿ ಮೂರು ರಾಜ್ಯದಲ್ಲಿ ಜಯಬೇರಿ ಹಾರಿಸಿದ್ದೇವೆ. ಇದಕ್ಕೆಲ್ಲ ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ ಹಾಗೂ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ ಕಾರಣರಾಗಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಪಂಚರಾಜ್ಯ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈ ಫಲಿತಾಂಶದಿಂದ ಬಿಜೆಪಿ ಹೊರತುಪಡಿಸಿ ಕಾಂಗ್ರೆಸ್ ಅಥವ ಬೇರೆ ಯಾವುದೇ ಪಕ್ಷದಲ್ಲಿ ದೇಶ ಆಳುವ ನಾಯಕತ್ವ ಇಲ್ಲ, ಕಾಂಗ್ರೆಸ್‌ನ ಬೂಟಾಟಿಕೆಗೆ ಕವಡೆಕಾಸಿನ ಕಿಮ್ಮತಿಲ್ಲ ಎಂಬುದು ಸ್ಪಷ್ಟವಾಗಿ ಜನ ತೋರಿಸಿದ್ದಾರೆ ಎಂದರು.
ಈ ಫಲಿತಾಂಶದ ಕಾರಣ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ೨೮ ಸ್ಥಾನ ಗೆಲುವುದರ ಮೂಲಕ ಮೋದಿ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ. ಬಿ.ವೈ. ವಿಜಯೇಂದ್ರ ರಾಜ್ಯಾಧ್ಯರಾದ ಬಳಿಕ ಜನರಲ್ಲಿ ಮೂಡಿರುವ ನಂಬಿಕೆ, ವಿಶ್ವಾಸದ ಲಾಭ ಪಡೆದು ಪಕ್ಷ ಭಲ ಪಡಿಸುತ್ತೇವೆ ಎಂದರು.