ಬೆಳಗಾವಿ: ರಾಜ್ಯದಲ್ಲಿ 2028ಕ್ಕೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಮತ್ತೆ ರಚನೆಯಾಗಬೇಕಾದರೆ “ಗಾಂಧಿ ಭಾರತ” ಕಾರ್ಯಕ್ರಮ ಪ್ರಮುಖ ಆದ್ಯತೆ ಆಗಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಡಿಸೆಂಬರ್ ತಿಂಗಳು 1924ನೇ ಇಸವಿಯಲ್ಲಿ ಮಹಾತ್ಮ ಗಾಂಧೀಜಿ ಅವರು, ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು.
ಈ ಸ್ಮರಣಾರ್ಥ ಗಾಂಧಿ ಭಾರತ ಕಾರ್ಯಕ್ರಮ ನಡೆಸಲು ಇದೇ ತಿಂಗಳು 26, 27ರಂದು ನಡೆಯಲಿರುವ ರಾಷ್ಟ್ರಮಟ್ಟದ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತಾ ಸಭೆಯನ್ನು ಡಿಕೆ ಶಿವಕುಮಾರ್ ಅವರು ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಬೆಳಗಾವಿಯಲ್ಲಿ ʼಗಾಂಧಿ ಭಾರತ ಕಾರ್ಯಕ್ರಮʼ ನಡೆಯುತ್ತಿರುವುದರಿಂದ ಈ ಜಿಲ್ಲೆಯು ಇತಿಹಾಸದ ಪುಟ ಸೇರುತ್ತದೆ ಎಂದು ಹೇಳಿದರು.
26ರಂದು ನಡೆಯಲಿರುವ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಕ್ಷದ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು, ಕಾಂಗ್ರೆಸ್ ಸಮಿತಿ ಅಧ್ಯಕ್ಷರುಗಳು, 150 ಜನ ಸಂಸದರು, ಶಾಸಕರು, ಹಾಗೂ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ. ಎಲ್ಲಾ ನಾಯಕರನ್ನು ಸೇರಿಸಿ ಈ ಕಾರ್ಯಕ್ರಮ ಯಾವಾಗ ಮಾಡುತ್ತೇವೆ ಎನ್ನುವುದು ಇನ್ನು ತೀರ್ಮಾನ ಆಗಿಲ್ಲ. ಇಂತಹ ಕಾರ್ಯಕ್ರಮ ಮತ್ತೆ ನಮ್ಮ ರಾಜ್ಯದಲ್ಲಿ ನಡೆಯುವಾಗ ನಾವು ಇರುತ್ತೇವೋ ಅಥವಾ ಇರುವುದಿಲ್ಲವೋ ಗೊತ್ತಿಲ್ಲ ಎಂದು ತಿಳಿಸಿದರು.
ಮಹಾತ್ಮ ಗಾಂಧೀಜಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಬೆಳಗಾವಿ ಅಧಿವೇಶನಕ್ಕೆ ಶತಮಾನ ತುಂಬಿದೆ. ಇದರ ಖುಷಿಯಲ್ಲಿ ನಾವು ಮತ್ತೇ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವನ್ನು ಬೆಳಗಾವಿಯಲ್ಲಿ ಮಾಡುತ್ತಿದ್ದೇವೆ ಎಂದರು.
ನಮ್ಮ ರಾಜ್ಯದ ಮಲ್ಲಿಕಾರ್ಜುನ ಖರ್ಗೆ ಅವರು ಈ ಸ್ಥಾನದಲ್ಲಿ ಇರುವುದು ನಮಗೆ ಹೆಮ್ಮೆ ತರುವಂತಹದು. ಈ ಕಾರ್ಯಕ್ರಮಕ್ಕೆ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಎಲ್ಲಾ ರಾಷ್ಟ್ರೀಯ ನಾಯಕರು ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.