Mysore
28
scattered clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಉತ್ಸವಕ್ಕೆ ಬಂದ ಆನೆಗೆ ಹೆರಿಗೆ: ಶಿವಮೊಗ್ಗ ಜಂಬೂ ಸವಾರಿ ರದ್ದು!

ಶಿವಮೊಗ್ಗ : ಮೈಸೂರು ದಸರ ನಂತರ ಆನೆಗಳ ಮೂಲಕ ನಗರದಲ್ಲಿ ಜಂಬೂಸವಾರಿ ಮಾಡುವಂತಹ ದೃಶ್ಯ ಕಂಡು ಬರುವುದು ಶಿವಮೊಗ್ಗದಲ್ಲಿ ಮಾತ್ರ.

ದಶಕಗಳ ಹಿಂದಿನಿಂದಲೂ ಅದ್ದೂರಿ ದಸರಾ ಆಚರಣೆ ಮಾಡಿಕೊಂಡು ಬರುತ್ತಿರುವ ಶಿವಮೊಗ್ಗ ನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ಕೆಲ ವರ್ಷಗಳಿಂದ ದಸರಾ ಉತ್ಸವಕ್ಕೆ ಸಮೀಪದ ಸಕ್ರೆಬೈಲು ಆನೆ ಬಿಡಾರದಿಂದ ಆನೆಗಳನ್ನ ಕರೆಯಿಸಿ ಮೆರವಣಿಗೆ ಮಾಡಿಸುತ್ತಿದೆ.

ಇಲ್ಲಿಯೂ ಉತ್ಸವ ಮೂರ್ತಿಯನ್ನ ಮರದ ಅಂಬಾರಿಯಲ್ಲಿ ಹೊತ್ತು ಆನೆಗಳು ಇಂದು ಸಾಗಬೇಕಿತ್ತು. ಆದರೆ ಅರಣ್ಯ ಇಲಾಖೆಯ ಹೊಣೆಗೇಡಿತನದಿಂದ ಉತ್ಸವದಲ್ಲಿ ಭಾಗಿಯಾಗಲು ಬಂದಂತಹ ನೇತ್ರಾವತಿ ಆನೆ ಕಳೆದ ರಾತ್ರಿಯೇ ಹೆಣ್ಣು ಮರಿಗೆ ಜನ್ಮ ನೀಡಿದೆ. ಜಂಬೂ ಸವಾರಿಯೂ ರದ್ದಾಗಿದೆ.

ಉತ್ಸವ ಮೂರ್ತಿಯನ್ನ ತೆರೆದ ವಾಹನದಲ್ಲಿ ಸಾಗಿಸಲು ಸಿದ್ಧತೆ ನಡೆದಿದೆ. ಶಿವಮೊಗ್ಗ ದಸರಾ ಉತ್ಸವಕ್ಕೆ ಪಾಲ್ಗೊಳ್ಳಲು ಅನುಭವಿ ಆನೆ ಸಾಗರ ಜೊತೆ ನೇತ್ರಾವತಿ ಹಾಗೂ ಹೇಮಾವತಿ ಎಂಬ ಎರಡು ಆನೆಗಳನ್ನ ಅಣಿಮಾಡಲಾಗಿತ್ತು. ಸಾಗರ್‌ ಅಂಬಾರಿ ಹೊತ್ತರೆ, ಎರಡು ಆನೆಗಳು ಜೊತೆ ಸಾಗಬೇಕಿತ್ತು.

ಶಿವಮೊಗ್ಗ ನಗರದಿಂದ ಹದಿನೈದು ಕಿಲೋಮೀಟರ್‌ ದೂರದ ಸಕ್ರೆಬೈಲು ಆನೆ ಬಿಡಾರದಲ್ಲೇ ಈ ಸೂಚಿತ ಆನೆಗಳಿಗೆ ಹದಿನೈದು ದಿನ ತಾಲೀಮು ನಡೆಸಿ, ಕೆಲ ದಿನಗಳ ಹಿಂದೆ ನಗರಕ್ಕೆ ಕರೆತರಲಾಗಿತ್ತು. ವಾಸವಿ ಶಾಲಾ ಆವರಣದಲ್ಲಿ ಆನೆಗಳ ಆರೈಕೆ ನಡೆಸಲಾಗಿತ್ತು. ವೈಭವದ ದಸರಾ ತೋರಿಸಲು ಪಾಲಿಕೆಯಿಂದ ಲಕ್ಷಾಂತರ ರೂಪಾಯಿ ವ್ಯಯಿಸಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಅದೃಷ್ಟವೆಂಬಂತೆ ಸುಮಾರು ಮೂವತ್ತು ವರ್ಷದ ಹೆಣ್ಣಾನೆ ನೇತ್ರಾವತಿ ಆರೋಗ್ಯವಂತ ಹೆಣ್ಣು ಮರಿಗೆ ಜನ್ಮ ನೀಡಿದೆ.

ದುರಾದೃಷ್ಟಕ್ಕೆ ಅರಣ್ಯ ಇಲಾಖೆಯ ನಿರ್ಲಕ್ಷ್ಯ, ಬೇಜವಾಬ್ದಾರಿ ಹಾಗೂ ಹೊಣೆಗೇಡಿತನ ತೀವ್ರ ಮುಜುಗರ ಉಂಟು ಮಾಡಿದೆ. ದುರಂತ ಅಂದ್ರೆ ಅರಣ್ಯಾಧಿಕಾರಿಗಳು ಹಾಗೂ ಸಕ್ರೆಬೈಲು ಆನೆ ಆರೋಗ್ಯ ಕಾಪಾಡುವ ವೈದ್ಯ ವಿನಯ್‌ ಗೂ ಕೂಡ ಈ ಆನೆ ಎಷ್ಟು ತಿಂಗಳಿಂದ ಗರ್ಭ ಧರಿಸಿತ್ತು ಎಂದು ಗೊತ್ತಿಲ್ಲ. ಸಾಲದು ಎಂಬಂತೆ ಈ ತನಕ ಉನ್ನತ ಮಟ್ಟದಲ್ಲಿ ಆನೆಯ ಗರ್ಭಾವಸ್ಥೆ ಟೆಸ್ಟ್ ಮಾಡುವ ಯಾವುದೇ ಕೆಲಸಕ್ಕೆ ಇಲಾಖೆ ಮುಂದಾಗಿಲ್ಲ. ಇಂತಹ ಯಾವುದೇ ವರದಿಯೂ ಅವರ ಬಳಿ ಇಲ್ಲ.

ಆನೆಯನ್ನ ಹದಿನೈದು ದಿನ ತರಬೇತಿ ಹೆಸರಲ್ಲಿ ಆಯಾಸ ಮಾಡಿಸಿ, ಪಾಲಿಕೆ ಹಣದ ವೈಭೋಗಕ್ಕೆ ಅನಾಗರೀಕ ವರ್ತನೆ ತೋರಿದ ಅಧಿಕಾರಿಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಘಟನೆ ನಡೆದು ಕೆಲ ಘಂಟೆಗಳಲ್ಲಿ, ನೇತ್ರಾವತಿ ಆನೆಯನ್ನ ಸಕ್ರೆಬೈಲು ಕ್ಯಾಂಪ್‌ಗೆ ಶಿಫ್ಟ್‌ ಮಾಡಿಸಲಾಗಿದೆ. ಉಳಿದೆರಡು ಆನೆಗಳು ಇಲ್ಲೇ ಉಳಿದುಕೊಂಡಿದ್ದು ದಸರಾ ಉತ್ಸವದಲ್ಲಿ ಅಂಬಾರಿ ಹೊತ್ತ ವಾಹನದ ಅಕ್ಕ ಪಕ್ಕ ಹೆಜ್ಜೆ ಹಾಕಲಿವೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!