ಬೆಂಗಳೂರು: ಗುತ್ತಿಗೆದಾರನ ಸಚಿನ್ ಆತ್ಮಹತ್ಯೆಗೂ ಸಚಿವ ಪ್ರಿಯಾಂಕ್ ಖರ್ಗೆಗೂ ಯಾವುದೇ ಸಂಬಂಧವಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪ ಹೊತ್ತಿರುವ ರಾಜು ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರಿಯಾಂಕ್ ಖರ್ಗೆ ಜೊತೆ ಇರುವ ಫೋಟೋಗಳನ್ನು ವಿಜಯೇಂದ್ರ ಬಿಡುಗಡೆ ಮಾಡಿದ್ದರು.
ಇದಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಯಡಿಯೂರಪ್ಪ ಸೇರಿದಂತೆ ಇನ್ನಿತರ ಬಿಜೆಪಿ ನಾಯಕರ ಜೊತೆ ರೌಡಿಗಳು ಇರುವ ಫೋಟೋಗಳು ನಮ್ಮ ಬಳಿಯೂ ಇವೆ. ಅವುಗಳನ್ನು ಬಿಡುಗಡೆ ಮಾಡಬೇಕಾ ಎಂದು ಪ್ರಶ್ನೆ ಮಾಡಿದರು.
ನಮ್ಮದು ಸ್ವಚ್ಛ ಸರ್ಕಾರ. ಗುತ್ತಿಗೆದಾರನ ಸಾವಿಗೂ ಪ್ರಿಯಾಂಕ್ ಖರ್ಗೆಗೂ ಯಾವುದೇ ಸಂಬಂಧವಿಲ್ಲ. ಮರಣ ಪತ್ರದಲ್ಲಿ ಇವರ ವಿರುದ್ಧ ನೇರ ಆರೋಪ ಇಲ್ಲ. ಬಿಜೆಪಿ ಆರೋಪ ಮಾಡಿದ ತಕ್ಷಣ ರಾಜೀನಾಮೆ ನೀಡಬೇಕಾ. ಖರ್ಗೆ ಪ್ರಾಮಾಣಿಕ ರಾಜಕಾರಣಿ. ಅವರ ಬೆಳವಣಿಗೆಯನ್ನು ವಿರೋಧ ಪಕ್ಷಗಳಿಗೆ ಸಹಿಸಲು ಆಗುತ್ತಿಲ್ಲ. ಆದ ಕಾರಣ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಬಿಜೆಪಿ ಅವಧಿಯಲ್ಲಿ ನನ್ನ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಆದರೆ ಬಿಜೆಪಿ ಸರ್ಕಾರದ ಭ್ರಷ್ಟಾಚಾರವನ್ನು ಸಿಬಿಐಗೆ ವಹಿಸಲಿಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಡಿ.ಕೆ.ರವಿ, ಸೌಜನ್ಯ ಸಾವು ಸೇರಿದಂತೆ ಹಲವಾರು ಪ್ರಕರಣಗಳನ್ನು ಸಿಬಿಐ ತನಿಖೆಗೆ ನೀಡಿದ್ದೆವು ಎಂದು ಹೇಳಿದರು.





