Mysore
15
clear sky

Social Media

ಶುಕ್ರವಾರ, 12 ಡಿಸೆಂಬರ್ 2025
Light
Dark

ಬಜ್‌ಟ್‌ನಲ್ಲಿ ಘೋಷಿಸಿದ ಯೋಜನೆಗಳನ್ನು ಜಾರಿಗೆ ತರಲು ವಾರದ ಗಡುವು ನೀಡಿದ  ಕೃಷಿ ಸಚಿವರು

ಬೆಂಗಳೂರು: ರಾಜ್ಯ ಸರ್ಕಾರ ಬಜೆಟ್ ನಲ್ಲಿ ಘೋಷಿಸಿರುವ ಹೊಸ ಕೃಷಿ ಯೋಜನೆಗಳನ್ನು ಜೂ 20 ರೊಳಗೆ ಅನುಷ್ಠಾನಕ್ಕೆ ತರುವಂತೆ ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಕಟ್ಟುನಿಟ್ಟಿನ‌ ಸೂಚನೆ ನೀಡಿದ್ದಾರೆ.

ವಿಧಾನ ಸೌಧದ ಸಮಿತಿ ಕೊಠಡಿಯಲ್ಲಿ 2024-25 ನೇ ಸಾಲಿನ ಆಯವ್ಯಯದಲ್ಲಿ ಘೋಷಣೆಯಾಗಿರುವ ಕೃಷಿ ಇಲಾಖೆ ಹೊಸ ಯೋಜನೆಗಳ ಅನುಷ್ಠಾನ ಕುರಿತು ಇಲಾಖೆ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಅವರು ಈ ನಿರ್ದೇಶನ ನೀಡಿದರು.

2024-25 ರ ಆಯವ್ಯಯಲ್ಲಿ ಘೋಷಣೆಯಾದ 19 ಯೋಜನೆಗಳಲ್ಲಿ 12 ಯೋಜನೆಗಳಿಗೆ ಸರ್ಕಾರಿ ಆದೇಶ ಹೊರಡಿಸಿದ್ದು ಬಾಕಿ ಉಳಿದ 7 ಘೋಷಣೆಗಳಿಗೆ ವಾರದೊಳಗೆ ಸರ್ಕಾರಿ ‌ಆದೇಶ ಹೊರಡಿಸಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಎಂದು ಸೂಚಿಸಿದರು.

ಸರ್ಕಾರದಲ್ಲಿ ಅನುದಾನಕ್ಕೆ ಕೊರತೆ ಇಲ್ಲ. ಕೃಷಿ ಕ್ಷೇತ್ರವನ್ನು ಸುಸ್ಥಿರ ಹಾಗೂ ಲಾಭದಾಯಕ ಗೊಳಿಸಲು ರೈತ ಸಮೃದ್ದಿ ಯೋಜನೆ ರೂಪಿಸಿದ್ದು ಇದು ಸಮರ್ಪಕವಾಗಿ ತಲುಪಬೇಕು, ಇದು ರಾಜ್ಯ ಸರ್ಕಾರದ ಆಶಯ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ ಒಳಗೊಂಡಂತೆ ವಿವಿಧ ಇಲಾಖೆಗಳ ಯೋಜನೆಗಳ ಸಂಯೋಜನೆ ಮೂಲಕ ಕಾರ್ಯಕ್ರಮ ಅನುಷ್ಠಾನ ಮಾಡಬೇಕು ಎಂದು ಚಲುವರಾಯ ಸ್ವಾಮಿ ಹೇಳಿದರು.

ಯೋಜನೆಗಳ ಅನುಷ್ಠಾನದ ಸಂದರ್ಭದಲ್ಲಿ ಉಂಟಾಗಬಹುದಾದ ಸಮಸ್ಯೆಗಳ ಬಗ್ಗೆ ಪೂರ್ವಾವಲೋಕನ ಆಗಬೇಕಿದೆ. ಈ ಬಗ್ಗೆ ಅಧಿಕಾರಿಗಳು ಚರ್ಚಿಸಿ ಅಭಿಪ್ರಾಯ ತಿಳಿಸಿ ಎಂದ ಕೃಷಿ ಸಚಿವರು, ಪ್ರತ್ಯೇಕ ಆಹಾರ ಸಂಸ್ಕೃರಣೆ ಮತ್ತು ರಪ್ತು ಉತ್ತೇಜನ ಆಯುಕ್ತಾಲಯ ಸ್ಥಾಪನೆ ಮತ್ತು ಕೆಲ ಸಂಸ್ಥೆಗಳನ್ನು ಅದರ ವ್ಯಾಪ್ತಿಗೆ ತರುವ ಬಗ್ಗೆ ಸಾಧಕ ಬಾಧಕಗಳ ಬಗ್ಗೆ ಪರಿಶೀಲಿಸಿ ಪ್ರಸ್ತಾವನೆ ಸಿದ್ದಪಡಿಸಿ ಎಂದರು.

ಕರ್ನಾಟಕ ರೈತ ಸಮೃದ್ದಿ ಯೋಜನೆ, ಕೃಷಿ ಅಭಿವೃದ್ಧಿ ಪ್ರಾಧಿಕಾರ, ಕೃಷಿ ಭಾಗ್ಯ ಯೋಜನೆ, ಸಮುದಾಯದ ಬೀಜ‌ ಬ್ಯಾಂಕ್ ಸ್ಥಾಪನೆ, ನಮ್ಮ ಮಿಲೆಟ್ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಆಗಬೇಕು ವ್ಯವಸ್ಥಿತ ಚಾಲನೆ ನೀಡಬೇಕು ಎಂದು ಚಲುವರಾಯಸ್ವಾಮಿ ಸೂಚಿಸಿದರು.

ಬೆಂಗಳೂರಿನಲ್ಲಿ ಆರ್.ಕೆ ಶಾಲಾ ಕೃಷಿ ಕ್ಷೇತ್ರವನ್ನು ತಾಂತ್ರಿಕತೆ ಪಸರಿಸುವ ಜ್ಞಾನ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸಿ ರೈತರಿಗೆ ಕೀಟ /ರೋಗ ಮತ್ತು ಪೋಷಕಾಂಶಗಳ ನಿರ್ವಹಣೆ ಸಲಹೆ ನೀಡಲು ಇ-ಸ್ಯಾಪ್ ತಂತ್ರಾಂಶ ಸರಿಯಾಗಿ ಬಳಸಬೇಕು ಅದನ್ನು ಉಪಯೋಗಿಸುವವರಿಗೆ ಸೂಕ್ತ ತರಬೇತಿ ಒದಗಿಸಿ ಎಂದು ಸಚಿವರು ತಿಳಿಸಿದರು.

ಮಿಷಿನ್ ಲರ್ನಿಂಗ್ ನಂತಹ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಬೆಳೆ ಉತ್ಪಾದಕತೆ ಮುನ್ಸೂಚಿಸಲು ದತ್ತಾಂಶ ಅಭಿವೃದ್ಧಿ ಪಡಿಸಿ, ರೈತ ಉತ್ಪಾದಕತೆ ಸಂಸ್ಥೆಗಳಿಗೆ ಬೆಂಬಲ ನೀಡಲು ಅಗ್ರಿ ಅ್ಯಕ್ಸಿಲೇಟರ್ ಪ್ಲ್ಯಾಟ್ ಫಾರ್ಮ್ ಮೂಲಕ ಕೃಷಿ ವಲಯದ ಸ್ಟಾರ್ಟಫ್ ಗಳನ್ನು ಉತ್ತೇಜಿಸುವ ಅನುಷ್ಠಾನ ಚುರುಕುಗೊಳಿಸಿ ಜೊತೆಗ ಇಲಾಖೆ ಯಲ್ಲಿ ಬಾಕಿ ಉಳಿದ ಕಡತಗಳನ್ನು ಪೂರ್ಣಗೊಳಿಸಿ ವಿಲೇವಾರಿಯಾಗುವಂತೆ ನಿಗಾವಹಿಸಿ ಎಂದು ಸಚಿವರು ಸೂಚನೆ ನೀಡಿದರು.

Tags:
error: Content is protected !!